ಪುತ್ತೂರು | ಪ್ರಚೋದನಕಾರಿ ಭಾಷಣ ಆರೋಪ: ಡಾ. ಕಲ್ಲಡ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು
ಪುತ್ತೂರು ನಿವಾಸಿ ರಾಮಚಂದ್ರ ಕೆ. ಅವರು ನೀಡಿದ ದೂರಿನ ಮೇರೆಗೆ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಕೋಮುಧ್ವೇಷ–ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಡಾ. ಕಲ್ಲಡ ಪ್ರಭಾಕರ ಭಟ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಪ್ರಕಾರ, ದಿನಾಂಕ 12.01.2026 ರಂದು ಪುತ್ತೂರಿನ ಖಾಸಗಿ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡಾ. ಕಲ್ಲಡ ಪ್ರಭಾಕರ ಭಟ್ ಅವರು, ಕಾರ್ಯಕ್ರಮಕ್ಕೆ ಹಾಜರಿದ್ದ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತೆ, ಕೋಮುಧ್ವೇಷ ಹಾಗೂ ಹಿಂಸೆಗೆ ಪ್ರಚೋದಿಸುವ ಭಾಷಣ ಮಾಡಿದ್ದಾರೆ ಎನ್ನಲಾಗಿದೆ. ಈ ಭಾಷಣವನ್ನು ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಡಾ. ಕಲ್ಲಡ ಪ್ರಭಾಕರ ಭಟ್ ಅವರ ವಿರುದ್ಧ, ಸದ್ರಿ ಭಾಷಣವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿತ್ತು.
ದೂರು ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸ್ ಠಾಣೆಯವರು ಅ.ಕ್ರ. 10/2026ರಂತೆ, ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂಗಳು 196, 299, 302, 353(2) ಮತ್ತು 3(5) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.













