ಪ್ರಕೃತಿ ಜೊತೆ ಬದುಕಿದರೆ ಉತ್ತಮ ಆರೋಗ್ಯ ಸಾಧ್ಯ: ಸುಬ್ರಹ್ಮಣ್ಯ ಶ್ರೀ
ಉಡುಪಿ: ಚಿಂತೆಯಿಂದ ಬದುಕಿದ ಪರಿಣಾಮ ಇಂದು ನಾವು ಅನಾರೋಗ್ಯಕ್ಕೆ ಒಳಗಾಗುತ್ತಿ ದ್ದೇವೆ. ಎಲ್ಲ ಅನಾರೋಗ್ಯಗಳಿಗೆ ಮಾನಸಿಕ ಅನಾರೋಗ್ಯವೇ ಕಾರಣ. ಆದುದರಿಂದ ನಾವು ಪ್ರಕೃತಿ ಜೊತೆ ಬದುಕಬೇಕು. ಇದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಸುಬ್ರಮಣ್ಯ ಮಠದ ಶ್ರೀವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಆತ್ರಾಡಿ ಮದಗದಲ್ಲಿರುವ ಪಂಚ ಲಹರಿ ಫೌಂಡೇಶನ್ನಲ್ಲಿ ಉಡುಪಿ ಪಂಚಮಿ ಟ್ರಸ್ಟ್ನ 25ನೇ ವರ್ಷದ ಸಂಭ್ರಮಾಚಾರಣೆಯನ್ನು ರವಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ, ಉಡುಪಿ ಶಾಸಕ ಯಾಶ್ಪಾಲ್ ಸುವರ್ಣ, ಹಿರಿಯ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ ಮಾತನಾಡಿದರು. ಮಿತ್ರ ಸಮಾಜ ಹೋಟೆಲ್ ಆಡಳಿತ ನಿರ್ದೇಶಕ ಎನ್.ಅಚ್ಚುತ ಹೊಳ್ಳ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ, ಲಕ್ಷ್ಮೀ ಹರಿಶ್ಚಂದ್ರ, ಡಾ.ಪಂಚಮಿ, ಡಾ.ವಿದ್ಯಾ ತಂತ್ರಿ ಉಪಸ್ಥಿತರಿದ್ದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ.ಹರೀಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕೊಳಲು ಗುರು ಬನ್ನಂಜೆ ರಾಘವೇಂದ್ರ ರಾವ್ ಮತ್ತು ರವಿ ಕುಳೂರ್ರವರ ಶಿಷ್ಯರಾದ ಬಾಲ ಕಲಾವಿದರಿಂದ ಕೊಳಲು ವಾದನ ನಡೆಯಿತು. ಕಾರ್ಯಕ್ರಮದ ಬಳಿಕ ಹೆಸರಾಂತ ವಯೋಲಿನ್ ವಾದಕಿ ಗುರುವಾಯುರಿನ ಕುಮಾರಿ ಗಂಗಾ ಶಶಿಧರನ್ರವರ ಕಚೇರಿ ನಡೆಯಿತು.