ಬಂಟ್ವಾಳ| ಪೊಲೀಸರೊಂದಿಗೆ ವಾಗ್ವಾದ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

Spread the love

ಬಂಟ್ವಾಳ| ಪೊಲೀಸರೊಂದಿಗೆ ವಾಗ್ವಾದ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅವಧಿ ಮೀರಿ ಧ್ವನಿವರ್ಧಕ ಬಳಸಿದ್ದಲ್ಲದೆ ಕಾನೂನು ಪಾಲನೆ ಬಗ್ಗೆ ತಿಳಿ ಹೇಳಲು ಹೋದ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ವಿರುದ್ಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪೂಂಜಾಲಕಟ್ಟೆ ಇದರ ವತಿಯಿಂದ ಆ.27ರಂದು ರಾತ್ರಿ ಸುಮಾರು 10.45 ಗಂಟೆಯ ವೇಳೆಗೆ ಧ್ವನಿ ವರ್ಧಕ ಅಳವಡಿಸಿ ಕಾರ್ಯಕ್ರಮ ನಡೆಯುತ್ತಿರುವುದು ಕಂಡು ಬಂದ ಮೇರೆಗೆ, ಪೂಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ಅವರು ಕಾರ್ಯಕ್ರಮದ ಆಯೋಜಕರಲ್ಲಿ ಧ್ವನಿ ವರ್ಧಕಗಳ ಬಳಕೆಯ ಬಗ್ಗೆ ಜಾರಿಯಲ್ಲಿರುವ ಕಾನೂನಿನ ಬಗ್ಗೆ ಹಾಗೂ ಕಾನೂನು ಪಾಲಿಸುವಂತೆ ಹಾಗೂ ಈಗಾಗಲೇ ಠಾಣೆಯಿಂದ ನೀಡಲಾಗಿರುವ ನೋಟೀಸ್ ಬಗ್ಗೆ ತಿಳುವಳಿಕೆ ನೀಡಿ ಧ್ವನಿವರ್ಧಕ ಸ್ಥಗಿತಗೊಳಿಸುವಂತೆ ತಿಳಿಸಿದ್ದು, ಅದರಂತೆ ಸಂಘಟಕರು ಧ್ವನಿವರ್ಧಕ ನಿಲ್ಲಿಸಿದ್ದರು.

ಆದರೆ ರಾತ್ರಿ ಸುಮಾರು 11.50ರ ವೇಳೆಗೆ ಠಾಣಾಧಿಕಾರಿ ಮತ್ತೆ ಅದೇ ಸ್ಥಳಕ್ಕೆ ಬಂದಾಗ ನಿರ್ದೇಶನ ಉಲ್ಲಂಘಿಸಿ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳೊಂದಿಗೆ ಕಾನೂನು ಉಲ್ಲಂಘಿನೆಯ ಬಗ್ಗೆ ಪ್ರಶ್ನಿಸಿದಾಗ, ಸ್ಥಳದಲ್ಲಿದ್ದ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೌಶಿಕ್ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಪುನೀತ್ ಮಡಂತ್ಯಾರು, ತಾರನಾಥ ಕಜೆಕ್ಕಾರು, ಗುರು ಮಡಂತ್ಯಾರು, ನಾಟಕ ಅಯೋಜಕರು ಹಾಗೂ ಸ್ಥಳದಲ್ಲಿದ್ದ ಸುಮಾರು 10-15 ಇತರ ಜನ ಗುಂಪು ಸೇರಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಪೊಲೀಸರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ದೂರಲಾಗಿದೆ.

ಆರೋಪಿಗಳು ಕಾರ್ಯಕ್ರಮದ ಅಯೋಜಕರಿಗೆ ನೀಡಲಾಗಿದ್ದ ತಿಳುವಳಿಕೆ ಪತ್ರದ ಷರತ್ತನ್ನು ಉಲ್ಲಂಘಿಸಿ ಧ್ವನಿವರ್ದಕ ಬಳಸಿ ಅಕ್ರಮ ಕೂಟ ಸೇರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/2025, ಕಲಂ 189(2), 191(2), 191(3), 132, 190 ಬಿ ಎನ್ ಎಸ್-2023 ಮತ್ತು ಕಲಂ 31, 37, 92(ಐ) ಕೆಪಿ ಆಕ್ಟ್ ಮತ್ತು ಕಲಂ 5,6 ಧ್ವನಿ ಮಾಲಿನ್ಯ ನಿಯಂತ್ರಣ ನಿಯಮಗಳು-2000 ರಂತೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments