ಬರಿಮಾರ್ ಶಾಲಾ ವಾಹನದ ಮೇಲೆ ಮರ ಬಿದ್ದು ವಿದ್ಯಾರ್ಥಿ ಸಾವು ಪ್ರಕರಣ: ವಿದ್ಯಾಕೇಂದ್ರ ವಿರುದ್ಧ ಪ್ರಕರಣ ದಾಖಲು

Spread the love

ಬರಿಮಾರ್ ಶಾಲಾ ವಾಹನದ ಮೇಲೆ ಮರ ಬಿದ್ದು ವಿದ್ಯಾರ್ಥಿ ಸಾವು ಪ್ರಕರಣ: ವಿದ್ಯಾಕೇಂದ್ರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ : ಬರಿಮಾರ್ ಎಂಬಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು ವಿದ್ಯಾರ್ಥಿ ಮೃತಪಟ್ಟು, ಹಲವು ಮಕ್ಕಳು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಕಲ್ಲಡ್ಕದ ‘ಶ್ರೀರಾಮ ವಿದ್ಯಾಕೇಂದ್ರ’ದ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 22 ಜುಲೈ 2026 ರಂದು ಸಂಭವಿಸಿದ ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಯು.ಡಿ.ಆರ್ (UDR) ಸಂಖ್ಯೆ 35/2026 ಕಲಂ 194 ಬಿಎನ್‌ಎಸ್‌ (BNS) ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (RTO) ಸದರಿ ಶಾಲಾ ವಾಹನದ ದಾಖಲೆ ಪತ್ರಗಳ ಮಾನ್ಯತೆಯ ಕುರಿತು ಅಧಿಕೃತ ವರದಿ ಪಡೆದಿದ್ದಾರೆ. ಈ ವೇಳೆ, ಘಟನೆ ಸಂಭವಿಸಿದ ಸಮಯದಲ್ಲಿ ವಾಹನದ ವಿಮಾ ಪತ್ರ (Insurance) ಹಾಗೂ ಅರ್ಹತಾ ಪತ್ರ (Fitness Certificate – FC) ಎರಡೂ ಚಾಲ್ತಿಯಲ್ಲಿರಲಿಲ್ಲ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ, ಸದ್ರಿ ಶಾಲಾ ವಾಹನವನ್ನು ‘ಶ್ರೀರಾಮ ವಿದ್ಯಾಕೇಂದ್ರ’ದ ಹೆಸರಿನಲ್ಲಿ ನೋಂದಾಯಿಸದೇ ಬೇರೆಯದ್ದೇ ಟ್ರಸ್ಟ್ ಒಂದರ ಮಾಲಕತ್ವದಲ್ಲಿ ಇರಿಸಲಾಗಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಅಗತ್ಯ ಕಾನೂನು ದಾಖಲೆಗಳನ್ನು ಹೊಂದಿರದ ಹಾಗೂ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವನ್ನುಂಟುಮಾಡುವಂತಹ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಬೇಜವಾಬ್ದಾರಿಯಿಂದ ಚಲಾಯಿಸಲು ಕಾರಣರಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2026, ಕಲಂ 125 ಬಿಎನ್‌ಎಸ್‌ (BNS) ಹಾಗೂ ಮೋಟಾರು ವಾಹನ ಕಾಯ್ದೆಯ (IMV Act) ಕಲಂ 196, 192(1) ರಂತೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


Spread the love
Subscribe
Notify of

0 Comments