ಬೆಂಗಳೂರಿನಿಂದ ಮಂಗಳೂರಿಗೆ ಮಾದಕ ವಸ್ತು ಪೊರೈಕೆ ಮಾಡುತ್ತಿದ್ದ ಉಗಾಂಡ ಮಹಿಳೆ ಬಂಧನ
ಮಂಗಳೂರು: ನಗರದಲ್ಲಿ ಯುವಕರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರು ಮಂದಿ ಪೆಡ್ಡರ್ ಗಳಿಗೆ ವ್ಯವಸ್ಥಿತವಾಗಿ ಬೆಂಗಳೂರಿನಿಂದ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ನಾಲ್ಕು ಕೆ.ಜಿ. ಎಂಡಿಎಂಎ ಯೊಂದಿಗೆ ಬೆಂಗಳೂರಿನ ಜಿಗಣಿ ಸರಹದ್ದಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಜಲಿಯಾ ಝಲ್ವಾಂಗೊ ಎಂದು ಗುರುತಿಸಲಾಗಿದೆ
ಆಕೆಯಿಂದ ವಶ ಪಡಿಸಿಕೊಂಡಿರುವ ಎಂಡಿಎಂಎ ಮೌಲ್ಯ ಸುಮಾರು 4 ಕೋ.ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪೊಲೀಸ್ ಕಸ್ಟಡಿಗೆ ಪಡೆದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮಂಗಳೂರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಜಾಲವನ್ನು ಕತ್ತರಿಸಿದಂತಾಗಿದೆ. ಈಗಾಗಲೇ ಮಂಗಳೂರಿನ 6 ಮಂದಿ ಪೆಡ್ಲರ್ ಗಳನ್ನು ಬಂಧಿಸಲಾಗಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.











