ಬೆಳ್ತಂಗಡಿ| ಬೆಂಗಳೂರಿನ ಮಹಿಳೆಯಿಂದ ವಂಚನೆ ಆರೋಪ: ಪ್ರಕರಣ ದಾಖಲು

Spread the love

ಬೆಳ್ತಂಗಡಿ| ಬೆಂಗಳೂರಿನ ಮಹಿಳೆಯಿಂದ ವಂಚನೆ ಆರೋಪ: ಪ್ರಕರಣ ದಾಖಲು

ಬೆಳ್ತಂಗಡಿ: ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆ ನೊಂದವರಿಗೆ ಸಹಾಯ ಮಾಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿರುವುದಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್‌, ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ ದೂರಿನ‌ ಅನ್ವಯ ಇದೀಗ ಪ್ರಕರಣ ದಾಖಲಾಗಿದೆ.

ರಾಜೇಶ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಗೆಹರಿಸುವುದಾಗಿ ಹೇಳಿ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಹಣ ಪಡೆದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರುದಾರ ರಾಜೇಶ್ ಅವರಿಗೆ ಸಂಧ್ಯಾ 2024ರಲ್ಲಿ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು, ತಾನು ಹೆಲ್ಪ್‌ಲೈನ್ ಮೂಲಕ ವಂಚನೆಗೊಳಗಾದವರಿಗೆ ನೆರವಾಗುತ್ತಿದ್ದೇನೆ. ಅಮಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಬಗೆಹರಿಸಿದ್ದೇನೆ ಎಂದು ರಾಜೇಶ್ ಅವರಿಗೆ ತಿಳಿಸಿದ್ದಾಳೆ ಎನ್ನಲಾಗಿದ್ದು, ರಾಜೇಶ್ ಅವರು ಬಂಟ್ವಾಳ‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್‌ಗೆ ತಿಳಿಸಿದ್ದಾರೆ. ಈ ವೇಳೆ ಸಂಧ್ಯಾ ಹೈಕೋರ್ಟ್ನಲ್ಲಿ ಕೇಸ್ ಬಗೆಹರಿಸುತ್ತೇನೆ, ಆದರೆ ಸ್ವಲ್ಪ ಖರ್ಚು ಇದೆ ಎಂದಿದ್ದಾಳೆ. ನಂತರ ರಾಜೇಶ್ ಅವರಿಂದ ಸಂಧ್ಯಾ ಹಂತ ಹಂತವಾಗಿ 3.20 ಲಕ್ಷ ರೂ. ಪಡೆದಿದ್ದಾಳೆ ಎನ್ನಲಾಗಿದು, ಹಣ ನೀಡಿದ ನಂತರವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಅವರು ಸಂಧ್ಯಾಗೆ ಪ್ರಶ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಸಂಧ್ಯಾ ಇನ್ನೂ ಹೆಚ್ಚಿನ ಹಣ ನೀಡುವಂತೆ ಹೇಳಿದ್ದು, ಇದರಿಂದ ಸಂಶಯಗೊಂಡ ರಾಜೇಶ್ ಅವರು ಕೋರ್ಟ್ಗೆ ಸಲ್ಲಿಸಿರುವ ದಾಖಲೆಗಳ ಬಗ್ಗೆ ಕೇಳಿದ್ದಾರೆ. ನಂತರ ಸಂಧ್ಯಾ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ರಾಜೇಶ್ ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಎನ್ಎಸ್ ಕಾಯ್ದೆ 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love