ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚನೆ

Spread the love

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚನೆ

ಮಂಗಳೂರು: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕುಡಿಯುವ ನೀರಿನ ಸಮಗ್ರ ನಿರ್ವಹಣೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ನಗರ ಸ್ಥಳೀಯ ವಾರ್ಡುಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ಅಡಚಣೆಯಾಗದಂತೆ ಹಾಗೂ ನೀರಿನ ಕೊರತೆಯಾಗದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ತಕ್ಷಣವೇ ಯೋಜನೆ ರೂಪಿಸಿ ಸಿದ್ಧಗೊಂಡಿರಬೇಕು. ಲಭ್ಯವಿರುವ ನೀರಿನ ಮೂಲಗಳನ್ನು ಗುರುತಿಸಿ ಅಗತ್ಯ ಸಂದರ್ಭದಲ್ಲಿ ನೀರು ಪೂರೈಕೆ ಆಗುವಂತೆ ಗಮನಹರಿಸಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ 14 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ನೀರಿನ ಮೂಲ ವಿತರಣಾ ಜಾಲವನ್ನು ಆಗ್ಗಿಂದಾಗೆ ಅಧಿಕಾರಿಗಳು ಖುದ್ದು ಮೇಲ್ವಿಚಾರಣೆ ನಡೆಸಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ನೀರು ಒದಗಿಸಲು ಟ್ಯಾಂಕರ್‍ಗಳನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಸ್ಥಳೀಯ ಸಂಸ್ಥೆಗಳು ಬೇಸಿಗೆಯಲ್ಲಿ ನೀರು ಒದಗಿಸಲು ತಮ್ಮಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳಬೇಕು ಎಂದರು.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ತುಂಬೆಯಿಂದ ನೇತ್ರಾವತಿ ನೀರು ಪೂರೈಕೆ ಜಾಲದಲ್ಲಿ ಕೆಲವೆಡೆ ಅನಧಿಕೃತ ಸಂಪರ್ಕ ಪಡೆದಿರುವ ಬಗ್ಗೆ ಕೂಡಲೇ ಕ್ರಮ ವಹಿಸಿ, ಸಂಬಂಧಿಸಿದ ಗ್ರಾಮ ಪಂಚಾಯತ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡು ಶುಲ್ಕ ಪಡೆಯುವಂತೆ ತಿಳಿಸಿದರು.

ತುಂಬೆ ನೇತ್ರಾವತಿ ಡ್ಯಾಮ್ ನಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆ ಹಾಗೂ ಕೈಗಾರಿಕೆಗಳ ಒಟ್ಟು 7 ಜಾಕ್‍ವೆಲ್‍ಗಳು ಕಾರ್ಯನಿರ್ವಹಿಸುತ್ತಿದೆ ಎಂದು ನಗರಪಾಲಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪ್ರಸ್ತುತ ನೇತ್ರಾವತಿ ಡ್ಯಾಮ್‍ನಲ್ಲಿ ಲಭ್ಯವಿರುವ ನೀರು ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ಈಗಿನ ಅಂದಾಜಿನಂತೆ ಸಾಕಾಗಲಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್‍ಗಳು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಗೆ ಸಮರ್ಪಕ ಮಾಹಿತಿ ಒದಗಿಸದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments