ಬ್ಯಾಂಕ್ ಮ್ಯಾನೇಜರ್, ಪೊಲೀಸರ ಸಕಾಲಿಕ ಕಾರ್ಯಾಚರಣೆ : ಡಿಜಿಟಲ್ ಅರೆಸ್ಟ್ ನಿಂದ ಪಾರಾದ ಕಿನ್ನಿಗೋಳಿಯ ವೃದ್ಧ ದಂಪತಿ
ಮುಲ್ಕಿ: ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಬಳಿಯ ವೃದ್ಧ ದಂಪತಿಯನ್ನು ಉತ್ತರ ಪ್ರದೇಶ ಮೂಲದ ವಂಚನಾ ತಂಡವೊಂದು ಅಸಾಂವಿಧಾನಿಕ ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಸುಮಾರು 84 ಲಕ್ಷ ರೂ. ವಂಚಿಸಲು ಯತ್ನಿಸಿದ್ದನ್ನು ಕಿನ್ನಿಗೋಳಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಹಾಗೂ ಮುಲ್ಕಿ ಪೊಲೀಸರು ಮಧ್ಯ ಪ್ರವೇಶಿಸಿ ವಿಫಲಗೊಳಿಸಿದ ಘಟನೆ ನಡೆದಿದೆ.
ದಾಮಸ್ ಕಟ್ಟೆ ಕೊಲ್ಬೆಟ್ಟು ಎಂಬಲ್ಲಿನ ವೃದ್ಧ ದಂಪತಿ ಬೆನೆಡಿಕ್ಟ್ ಫೆರ್ನಾಂಡಿಸ್(84) ಹಾಗೂ ಅವರ ಪತ್ನಿ ಲಿಲ್ಲಿ ಫೆರ್ನಾಂಡಿಸ್(71)ರಿಗೆ ಸೋಮವಾರ ವಾಟ್ಸ್‌ಆ್ಯಪ್ ಮೂಲಕ ವೀಡಿಯೊ ಕರೆಯೊಂದು ಬಂದಿದೆ. ಕರೆ ಮಾಡಿದವರು ತಾವು ಉತ್ತರ ಪ್ರದೇಶದ ಸಿಐಡಿ ಪೊಲೀಸರು ಎಂದು ಹೇಳಿ ನಕಲಿ ದಾಖಲೆಗಳನ್ನು ತೋರಿಸಿ ಪರಿಚಯಿಸಿಕೊಂಡಿದ್ದಾರೆ. ನೀವು ಮುಂಬೈನ ಬ್ಯಾಂಕ್ ಖಾತೆಯಿಂದ ಆರು ಕೋಟಿ ರೂ. ಡ್ರಾ ಮಾಡಿ ವಂಚಿಸಿದ್ದೀರಿ. ನಿಮ್ಮ ವಿರುದ್ಧ ವಂಚನೆ ಕೇಸು ದಾಖಲಾಗಿದೆ. ಆ ಹಣವನ್ನು ಹಿಂದಿರುಗಿಸಬೇಕು. ಹಣ ನೀಡುವವರೆಗೆ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಡಿಜಿಟಲ್ ಅರೆಸ್ಟ್‌ನಿಂದ ತಪ್ಪಿಸಿಕೊಳ್ಳಲು ಯೋಚಿಸಬೇಡಿ. ಒಂದು ವೇಳೆ ಮನೆಯಿಂದ ಹೊರ ಬಂದರೆ ನಮ್ಮ ಸಿಬ್ಬಂದಿ ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತಾರೆ. ತಮ್ಮ ಖಾತೆಯಲ್ಲಿರುವ 84 ಲಕ್ಷ ರೂ.ನ್ನು ತಕ್ಷಣಕ್ಕೆ ವರ್ಗಾಯಿಸಬೇಕು ಎಂದು ಬೆದರಿಕೆ ಹಾಕಿದ್ದರು.
ಇದರಿಂದ ವಿಚಲಿತರಾದ ದಂಪತಿ ಬುಧವಾರ ಕಿನ್ನಿಗೋಳಿಯ ಕೆನರಾ ಬ್ಯಾಂಕ್‌ಗೆ ತೆರಳಿ ತಮ್ಮ ಎಫ್‌ಡಿ ಖಾತೆಯಲ್ಲಿರುವ 84 ಲಕ್ಷ ರೂ.ವನ್ನು ವಂಚಕರ ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಬ್ಯಾಂಕ್ ಮ್ಯಾನೇಜರ್‌ರನ್ನು ಕೋರಿದ್ದರು. ತಕ್ಷಣಕ್ಕೆ ಅಷ್ಟು ದೊಡ್ಡ ಮೊತ್ತ ಯಾಕೆ ವರ್ಗಾವಣೆ ಮಾಡುತ್ತೀರಿ ಎಂದು ಮ್ಯಾನೇಜರ್ ರಾಯಿಸ್ಟನ್ ವಿಚಾರಿಸಿದಾಗ, ಬೆಂಗಳೂರಿನಲ್ಲಿ ನಿವೇಶನ ಖರೀದಿಸಲೆಂದು ದಂಪತಿ ಸಬೂಬು ಹೇಳಿದ್ದರು. ಮತ್ತೆ ಮ್ಯಾನೇಜರ್ ದಂಪತಿಯನ್ನು ಪ್ರಶ್ನಿಸಿದಾಗ, ದಂಪತಿ ಸರಿಯಾದ ಉತ್ತರ ನೀಡಿರಲಿಲ್ಲ. ಇದರಿಂದ ಸಂಶಯಗೊಂಡ ಬ್ಯಾಂಕ್ ಮ್ಯಾನೇಜರ್ ವಂಚಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಿಲ್ಲ. ಅಲ್ಲದೇ, ಕಿನ್ನಿಗೋಳಿ ಪರಿಸರದ ಬೀಟ್ ಪೊಲೀಸ್ ಸಿಬ್ಬಂದಿ ಯಶವಂತ್ ಕುಮಾರ ಹಾಗೂ ಠಾಣಾ ಗುಪ್ತವಾರ್ತೆ ಸಿಬ್ಬಂದಿ ಕಿಶೋರ್‌ರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ಧ ದಂಪತಿಯ ಮನೆಗೆ ತೆರಳಿ ಅವರ ಮೊಬೈಲ್ ಫೋನ್‌ನನ್ನು ಪರಿಶೀಲಿಸಿದಾಗ ಅವರು ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರು ಬ್ಯಾಂಕ್ ಮ್ಯಾನೇಜರ್‌ರಿಗೆ ಕರೆ ಮಾಡಿ ವಿಚಾರ ತಿಳಿಸಿ ದಂಪತಿ ನೀಡಿರುವ ವಂಚಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡದಂತೆ ಸೂಚಿಸಿದ್ದಾರೆ. ವೃದ್ದ ದಂಪತಿಗೆ ವಂಚಕರ ಜಾಲದ ಬಗ್ಗೆ ತಿಳುವಳಿಕೆ ನೀಡಿದ್ದಾರೆ.
ಈ ಬಗ್ಗೆ ಮುಲ್ಕಿ ಠಾಣಾ ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯಿಸ್ಟನ್‌ರ ಸಮಯಪ್ರಜ್ಞೆ ಮತ್ತು ಮುಲ್ಕಿ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ವೃದ್ಧ ದಂಪತಿ ಲಕ್ಷಾಂತರ ರೂ. ವಂಚನೆಗೊಳಗಾಗುವುದು ತಪ್ಪಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರ ನಿರ್ದೇಶನದಂತೆ ಪಣಂಬೂರು ಉಪ ವಿಭಾಗದ ಪೊಲೀಸ್ ಆಯುಕ್ತ ಶ್ರೀಕಾಂತ್‌ರ ಮಾರ್ಗದರ್ಶನದಲ್ಲಿ ಮುಲ್ಕಿ ಪೊಲೀಸ್ ನಿರೀಕ್ಷಕ ಮಂಜುನಾಥ್‌ರ ಆದೇಶದಂತೆ ಮುಲ್ಕಿ ಠಾಣೆಯ ಸಿಬ್ಬಂದಿ ಕಿಶೋರ್ ಕುಮಾರ್, ಯಶವಂತ ಈ ಕಾರ್ಯಾಚರಣೆ ನಡೆಸಿದ್ದಾರೆ.













