ಭರತ್ ಕುಮ್ಡೇಲ್ ವಿರುದ್ಧದ ಕೋಕಾ ಪ್ರಕರಣ: ಚಾರ್ಜ್ಶೀಟ್ ವಿಸ್ತರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್
ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಳೆದ ಮೇ 27ರಂದು ನಡೆದಿದ್ದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ 14 ಆರೋಪಿಗಳ ವಿರುದ್ಧದ ಕೋಕಾ (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಪ್ರಕರಣದ ತನಿಖೆಗೆ ಕಾಲಾವಕಾಶ ವಿಸ್ತರಿಸಬೇಕೆಂದು ಕೋರಿ ಬಂಟ್ವಾಳ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಮೈಸೂರು ಜಿಲ್ಲಾ ಪ್ರಧಾನ ಸೆಷನ್ಸ್ ಹಾಗೂ ವಿಶೇಷ (ಕೋಕಾ) ನ್ಯಾಯಾಲಯವು ಶನಿವಾರ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದಲ್ಲಿ ಸುಮಿತ್.ಬಿ, ದೀಪಕ್, ವಿ.ರವಿರಾಜ ಮೂಲ್ಯ, ಪೃಥ್ವಿರಾಜ್ ಜೋಗಿ, ಚಿಂತನ್, ಅಭಿನ್ ರೈ, ತೇಜಾಕ್ಷ, ಶಿವಪ್ರಸಾದ್ ತುಂಬೆ, ಪ್ರದೀಪ, ಶಾಹಿತ್, ಸಚಿನ್, ರಂಜಿತ್, ರವಿಸಂಜಯ್ ಅವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಆರೋಪಿಯಾಗಿದ್ದ ಭರತ್ ಕುಮ್ಡೇಲ್ ತಲೆಮರೆಸಿಕೊಂಡಿದ್ದ.
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯುತ್ತಿರುವಾಗ, ಭರತ್ ಕುಮ್ಡೇಲ್ ಮತ್ತೊಂದು ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿದ್ದ. ಆ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು, 14 ಆರೋಪಿಗಳ ಮೇಲೆ ಕೋಕಾ ಕಾಯ್ದೆಯಡಿ ತನಿಖೆ ನಡೆಸಲು ಅವಕಾಶ ಕೇಳಿದರು. ಮೈಸೂರು ನ್ಯಾಯಾಲಯದಲ್ಲಿ ಕೋಕಾ ವಿಶೇಷ ನ್ಯಾಯಾಲಯ ಇರುವುದರಿಂದ ಪ್ರಕರಣ ಇಲ್ಲಿಗೆ ವರ್ಗಾವಣೆಗೊಂಡಿತ್ತು.
ಪೊಲೀಸರು ವಿಚಾರಣೆಗಾಗಿ ಆರೋಪಿಗಳನ್ನು ಕಸ್ಟಡಿಗೆ ಕೇಳಿದ್ದರಿಂದ ನ್ಯಾಯಾಲಯವು 12 ದಿನಗಳು ಕಸ್ಟಡಿಗೆ ಒಪ್ಪಿಸಿತ್ತು. ಈಚೆಗೆ ಪೊಲೀಸರು ತನಿಖೆಗೆ ಕಾಲಾವಕಾಶ ವಿಸ್ತರಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ‘ಕೋಕಾ ನಿಯಮದಂತೆ 90 ದಿನಗಳೊಗಾಗಿ ಹೆಚ್ಚುವರಿ ಸಮಯಾವಕಾಶ ಕೇಳಬೇಕಿತ್ತು. ಪೊಲೀಸರು ಸಮಯ ಮೀರಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ವಾದ ಮಂಡಿಸಿದರು.
ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶೆ ಉಷಾರಾಣಿ ವಾದ-ಪ್ರತಿವಾದ ಆಲಿಸಿ, ‘ಕಾಲಾವಕಾಶ ವಿಸ್ತರಣೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಪ್ರಕರಣವನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಡಿ.2ಕ್ಕೆ ಆರೋಪಿಗಳನ್ನು ಹಾಜರುಪಡಿಸಬೇಕು’ ಎಂದು ಆದೇಶಿಸಿದರು.
ಆರೋಪಿಗಳ ಪರ ಸಿ.ವಿ.ಕೇಶವಮೂರ್ತಿ, ಮಹೇಶ್ ಕಜೆ, ಪ್ರಸಾದ್ ಕುಮಾರ್ ರೈ, ಪಿ.ಜೆ.ರಾಘವೇಂದ್ರ ವಾದ ಮಂಡಿಸಿದರು.













