ಮಂಗಳೂರು: 517 ಗ್ರಾಂ ಎಂಡಿಎಂಎ ವಶ : ನಾಲ್ವರು ಆರೋಪಿಗಳ ಬಂಧನ

Spread the love

ಮಂಗಳೂರು: 517 ಗ್ರಾಂ ಎಂಡಿಎಂಎ ವಶ : ನಾಲ್ವರು ಆರೋಪಿಗಳ ಬಂಧನ

ಮಂಗಳೂರು: ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಮೂಲ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಬಂಧಿಸಿದ್ದಾರೆ. ಆರೋಪಿಗಳಿಂದ 517.76 ಗ್ರಾಂ ಎಂಡಿಎಂಎ ಶನಿವಾರ ವಶಪಡಿಸಿಕೊಂಡಿದ್ದು, ಅದರ ಮೌಲ್ಯ 50 ಲಕ್ಷ ಎಂದು ಅಂದಾಜಿಸಲಾಗಿದೆ.

ಬೈಂದೂರು ತಾಲ್ಲೂಕು ನಾವುಂದ ಗ್ರಾಮದ ಮೊಹಮ್ಮದ್ ಶಿಯಾಬ್ ಅಲಿಯಾಸ್ ಶಿಯಾಬ್, ಉಳ್ಳಾಲ ತಾಲ್ಲೂಕು ನರಿಂಗಾನ ಗ್ರಾಮದ ಮೊಹಮ್ಮದ್ ನೌಷದ್ ಅಲಿಯಾಸ್ ನೌಷದ್, ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ ಅಲಿಯಾಸ್ ಇಂಬ ಹಾಗೂ ಬಂಟ್ವಾಳ ತಾಲ್ಲೂಕು ಬ್ರಹ್ಮರಕೊಟ್ಲುವಿನ ನಿಸಾ‌ರ್ ಅಹಮ್ಮದ್ ಅಲಿಯಾಸ್ ನಿಸಾರ್ ಬಂಧಿತರು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾದಕ ಪದಾರ್ಥ ಕಳ್ಳಸಾಗಣೆಯಾಗುತ್ತಿರುವ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ಬಂದಿತ್ತು. ಮಂಗಳೂರು-ಉಡುಪಿ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ ಮುಲ್ಕಿ ಬಳಿಯ ಸುಂದರಾಮ್ ಶೆಟ್ಟಿ ಕನ್ವೆನ್ಸನ್ ಹಾಲ್ ಸಮೀಪ ಆರೋಪಿಗಳು ಮಾದಕ ಪದಾರ್ಥ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಸಿಸಿಬಿ ಪೊಲೀಸರ ತಂಡವು ಅವರನ್ನು ಬಂಧಿಸಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ನೀಲಿ ಬಣ್ಣದ ಮಾರುತಿ ಕಂಪನಿಯ ಫ್ರಾಂಕ್ಸ್ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಅಂದಾಜು ಮೌಲ್ಯ 10 ಲಕ್ಷ. ಆರೋಪಿಗಳಿಂದ ಐದು ಮೊಬೈಲ್‌ಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾರಾಟ ಮಾಡಲು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸಲು ಈ ಮಾದಕ ಪದಾರ್ಥವನ್ನು ತಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಮಾದಕ ವಸ್ತುವನ್ನು ಬೆಂಗಳೂರಿನಲ್ಲಿ ವಾಸವಿರುವ ನೈಜೀರಿಯಾ ಪ್ರಜೆಯಿಂದ ಖರೀದಿಸಿ ತಂದಿರುವುದಾಗಿ ತಿಳಿಸಿದ್ದಾರೆ’ ಎಂದು ಪೊಲೀಸ್ ಕಮಿಷನ‌ರ್ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 22(ಸಿ) ಮತ್ತು 21(ಸಿ) (ವಾಣಿಜ್ಯ ಬಳಕೆ ಪ್ರಮಾಣದಲ್ಲಿ ಮಾದಕ ಪದಾರ್ಥ ಖರೀದಿ/ಸಾಗಣೆ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3(5) (ಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ನಡೆಸುವ ಕೃತ್ಯ) ಅಡಿ ಪ್ರಕರಣ ದಾಖಲಾಗಿದೆ


Spread the love
Subscribe
Notify of

0 Comments
Inline Feedbacks
View all comments