ಮಂಗಳೂರು | ಅಖಿಲ ಭಾರತ ಕಾರ್ಮಿಕರ ಮಹಾ ಮುಷ್ಕರ: ಹಳೆ ಬಂದರು ಮಾರುಕಟ್ಟೆ ಸ್ತಬ್ದ
ಮಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆ (Labour Code 2025)ಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಅಖಿಲ ಭಾರತ ಮಹಾ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಹಳೆ ಬಂದರು ಸಗಟು ಮಾರುಕಟ್ಟೆಯಲ್ಲಿ ಮಂಗಳವಾರ ವಹಿವಾಟು ಬಹುತೇಕ ಸ್ಥಗಿತಗೊಂಡಿತ್ತು.
29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸ ಕಾರ್ಮಿಕ ಸಂಹಿತೆ ಜಾರಿಗೊಳಿಸಿರುವುದನ್ನು ಖಂಡಿಸಿ ಹಮಾಲಿ ಕಾರ್ಮಿಕರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಮುಷ್ಕರದಲ್ಲಿ ಭಾಗವಹಿಸಿದರು. ಸದಾ ಚಟುವಟಿಕೆಯಿಂದಿದ್ದ ಮಾರುಕಟ್ಟೆ ಕಾರ್ಮಿಕರಿಲ್ಲದೆ ನಿಶ್ಶಬ್ದವಾಗಿದ್ದು, ವಹಿವಾಟು ಕುಂಠಿತಗೊಂಡ ದೃಶ್ಯ ಕಂಡುಬಂತು.
ಕಾರ್ಮಿಕರ ಗೈರುಹಾಜರಾತಿಯಿಂದ ಸರಕುಗಳ ಹತ್ತುವಿಳಿತ ಕಾರ್ಯಗಳು ಸ್ಥಗಿತಗೊಂಡಿದ್ದು, ಬಹುತೇಕ ವರ್ತಕರು ಅಂಗಡಿ ಹಾಗೂ ಗೋದಾಮುಗಳನ್ನು ತೆರೆಯಲಿಲ್ಲ. ಜನಸಾಮಾನ್ಯರ ಓಡಾಟವೂ ವಿರಳವಾಗಿತ್ತು.
ಬಂದರು ಶ್ರಮಿಕರ ಸಂಘವು ಮುಷ್ಕರಿಗೆ ಬೆಂಬಲ ಸೂಚಿಸಿ ಕಾರ್ಮಿಕರ ಸಭೆ ನಡೆಸಿ ಮುಷ್ಕರ ಯಶಸ್ವಿಗೊಳಿಸಲು ಸಿದ್ಧತೆ ಕೈಗೊಂಡಿತ್ತು.













