ಮಂಗಳೂರು: ಐದು ಮಂದಿ ಮಾದಕ ವಸ್ತುಗಳ ಮಾರಾಟಗಾರರ ಬಂಧನ
ಮಂಗಳೂರು: ನಗರ ಹೊರವಲಯದ ಪಡುಶೆಡ್ಡೆ ಗ್ರಾಮದ ಹಾಲಾಡಿ ಎಂಬಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್ ಠಾಣೆಯ ಪೊಲೀಸರು ಬುಧವಾರ ದಾಳಿ ಮಾಡಿ ಐವರು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ನಗರದ ಬಿಕರ್ನಕಟ್ಟೆಯ ಅಡು ಮರೋಳಿ ನಿವಾಸಿ ತುಷಾರ್ ಸೋನು (21), ನಾಗುರಿಯ ಧನ್ವಿ ಶೆಟ್ಟಿ (20), ಜಲ್ಲಿಗುಡ್ಡೆಯ ಸಾಗರ್ ಕರ್ಕೇರಾ (19), ಶಕ್ತಿನಗರದ ವಿಕಾಸ್ ಥಾಪ ಪುಚ್ಚಿ (23), ಅಳಕೆ ಕಂಡೆಟ್ಟು ಎಂಬಲ್ಲಿನ ವಿಘ್ನೇಶ್ ಕಾಮತ್ (24) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ 5.759 ಕೆ.ಜಿ. ತೂಕದ 5,20,000 ರೂ. ಮೌಲ್ಯದ ನಿಷೇಧಿತ ಗಾಂಜಾ ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 6 ಮೊಬೈಲ್ ಫೋನ್, 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳ ಲಾಗಿದೆ. ಇವರು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಗರದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ (ಪೆಡ್ಲರ್) ಮಾಡುವವರಾಗಿರುತ್ತಾರೆ. ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಗಳಲ್ಲಿ ಪ್ಯಾಕ್ ಮಾಡಿ ಪ್ರತಿ ಗಾಂಜಾ ಪ್ಯಾಕೇಟ್ಗೆ 1,000 ರೂ.ನಂತೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಆರೋಪಿಗಳಿಗೆ ಎಲ್ಲಿಂದ ಗಾಂಜಾ ಪೂರೈಕೆಯಾಗುತ್ತಿದೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ಆರೋಪಿಗಳ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.