ಮಂಗಳೂರು: ಕೊಲೆ ಯತ್ನ ಪ್ರಕರಣ – ಆರೋಪಿಗೆ 4 ವರ್ಷ ಜೈಲು ಶಿಕ್ಷೆ

Spread the love

ಮಂಗಳೂರು: ಕೊಲೆ ಯತ್ನ ಪ್ರಕರಣ – ಆರೋಪಿಗೆ 4 ವರ್ಷ ಜೈಲು ಶಿಕ್ಷೆ

ಮಂಗಳೂರು: ಮೊಬೈಲ್ ಆನ್‌ಲೈನ್ ಗೇಮ್ ಫ್ರೀ ಫೈರ್ ನಲ್ಲಿ ಸೋತ ದ್ವೇಷದಿಂದ ಯುವಕನ ಮೇಲೆ ಚೂರಿಯಿಂದ ಕೊಲೆಯತ್ನ ನಡೆಸಿದ ಪ್ರಕರಣದಲ್ಲಿ, ಆರೋಪಿಗೆ ಮಾನ್ಯ ನ್ಯಾಯಾಲಯವು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಂಗಳೂರು ನಗರದ ಜೆಪ್ಪು ಬಪ್ಪಾಲ್ ನಿವಾಸಿ ಪ್ರತ್ಯುಶ್ ಸಾಲಿಯಾನ್ ಅವರು ಫ್ರೀ ಫೈರ್ ಮೊಬೈಲ್ ಗೇಮ್‌ನಲ್ಲಿ ಸಂಜಯ್ ಪೂಜಾರಿ ಎಂಬುವರನ್ನು ಸೋಲಿಸಿದ್ದ ಕಾರಣದಿಂದಾಗಿ, ಸಂಜಯ್ ಪೂಜಾರಿಗೆ ಪ್ರತ್ಯುಶ್ ಮೇಲಿನ ದ್ವೇಷ ಉಲ್ಬಣಗೊಂಡಿತ್ತು. ಇದೇ ಹಿನ್ನೆಲೆ, ದಿನಾಂಕ 17-05-2023 ರಂದು ಮಧ್ಯಾಹ್ನ 3.40ರ ಸುಮಾರಿಗೆ, ಪ್ರತ್ಯುಶ್ ಸಾಲಿಯಾನ್ ಅವರು ತಮ್ಮ ಮನೆಯಿಂದ ನಡೆದುಕೊಂಡು ನಂದಿಗುಡ್ಡೆ ಕಡೆಗೆ ತೆರಳುತ್ತಿದ್ದ ವೇಳೆ, ಸಂಜಯ್ ಪೂಜಾರಿ ಅಕ್ರಮವಾಗಿ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚೂರಿಯಿಂದ ಕೊಲೆಯತ್ನ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 63/2023 ರಂತೆ ಕಲಂ 341, 324, 307, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಪಿಎಸ್‌ಐ ಶೀತಲ್ ಅಲಗೂರು ನಡೆಸಿದ್ದು, ನಂತರ ಪಿಎಸ್‌ಐ ಮನೋಹರ್ ಪ್ರಸಾದ್ ಪಿ. ಅವರು ತನಿಖೆ ಪೂರ್ಣಗೊಳಿಸಿ, ಆರೋಪಿತನ ವಿರುದ್ಧ ಕಲಂ 341, 325, 324, 326, 307, 504, 506 ಐಪಿಸಿ ಅಡಿಯಲ್ಲಿ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಗಳೂರು ಇಲ್ಲಿ ಎಸ್‌ಸಿ ನಂ.20/2024 ರಂತೆ ನಡೆದು, ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜ್ಯೋತಿ ನಾಯಕ್ ಅವರು ವಾದ ಮಂಡಿಸಿದ್ದರು.

ಎಲ್ಲಾ ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ, ಮಾನ್ಯ ನ್ಯಾಯಾಲಯವು ದಿನಾಂಕ 31-01-2026 ರಂದು ಆರೋಪಿ ಸಂಜಯ್ ಪೂಜಾರಿಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.20,500 ದಂಡ ವಿಧಿಸಿ ತೀರ್ಪು ನೀಡಿದೆ.


Spread the love
Subscribe
Notify of

0 Comments
Inline Feedbacks
View all comments