ಮಂಗಳೂರು: ಕೊಳದಲ್ಲಿ ಮುಳುಗಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದ ಈಜುಪಟು ಮೃತ್ಯು

Spread the love

ಮಂಗಳೂರು: ಕೊಳದಲ್ಲಿ ಮುಳುಗಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದ ಈಜುಪಟು ಮೃತ್ಯು

ಮಂಗಳೂರು: ಈಜುಕೊಳದಲ್ಲಿ ಉಸಿರು ಬಿಗಿ ಹಿಡಿದು ಸೋಮರ್‌ಸಾಲ್ಟ್ ಮತ್ತು ಆಸನಗಳನ್ನು ಪ್ರದರ್ಶಿಸಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದ ಈಜುಪಟು ಕೆ. ಚಂದ್ರಶೇಖರ ರೈ ಸೂರಿಕುಮೇರು (52) ಎಂಬವರು ರವಿವಾರ ನಗರದ ಮನಪಾದ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಸಮೀಪದ ಸೂರಿಕುಮೇರು ಬರಿಬರದ ಎಂಬಲ್ಲಿನ ಚಂದ್ರಶೇಖರ ನಗರದ ಕುದ್ರೋಳಿಯಲ್ಲಿ ವಾಸವಾಗಿದ್ದರು. ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.

ಉಡುಪಿಯ ಈಜುಕೊಳದಲ್ಲಿ ಗುತ್ತಿಗೆ ಆಧಾರದಲ್ಲಿ ಲೈಫ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಮೂರು ವರ್ಷದ ಹಿಂದೆ ನಗರದ ಮಂಗಳೂರು ಮಹಾನಗರಪಾಲಿಕೆ ಈಜುಕೊಳದ ನಿರ್ವಹಣೆ ಮಾಡುತ್ತಿದ್ದರು. ಜೀವರಕ್ಷಕರಾಗಿದ್ದ ಅವರು ಈಜು ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ರವಿವಾರ ಬೆಳಗ್ಗೆ ಕೆಲಕಾಲ ಈಜುಕೊಳದಲ್ಲಿ ಅಭ್ಯಾಸ ಮಾಡುವುದಾಗಿ ಹೇಳಿ ಮೊಬೈಲ್ ಫೋನನ್ನು ಕಾವಲುಗಾರನಿಗೆ ನೀಡಿದ್ದ ಚಂದ್ರಶೇಖರ್ ಡೈವ್ ಮಾಡಿದ್ದರು. ಬಳಿಕ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಚಂದ್ರಶೇಖರ್‌ರ ಸಹೋದರ ರಾಧಾಕೃಷ್ಣ ರೈ ತಿಳಿಸಿದ್ದಾರೆ.

2023ರಲ್ಲಿ ಒಂದೇ ಉಸಿರಿನಲ್ಲಿ 28 ಬಾರಿ ಮುಂಭಾಗಕ್ಕೆ ತಿರುಗಿ (ಫ್ರಂಟ್ ಫ್ಲಿಪ್ ಸೋಮರ್‌ಸಾಲ್ಟ್) ಚಂದ್ರಶೇಖರ ರೈ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದರು. ಅದಕ್ಕೂ ಮೊದಲು ಎರಡು ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments