ಮಂಗಳೂರು| ತನಿಖೆಯಲ್ಲಿ ಗಂಭೀರ ಲೋಪ : ಇಬ್ಬರು ಪೊಲೀಸರ ಅಮಾನತು
ಮಂಗಳೂರು: ವಿದೇಶಗಳಲ್ಲಿ ವಂಚನೆಯ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಗಂಭೀರ ಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.
ಹಿಂದಿನ ದೂರುಗಳು ಮತ್ತು ನಿರ್ದೇಶನಗಳನ್ನು ನೀಡಿದ್ದರೂ ಸಹ, ಮೆಸರ್ಸ್ ಹೈರ್ಗ್ಲೋ ಎಲಿಗಂಟ್ ಓವರ್ಸೀಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಫಲರಾದ ಕಾರಣ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೋಮಶೇಖರ್ ಜಿ.ಸಿ. ಅವರನ್ನು ಅಮಾನತುಗೊಳಿಸಲಾಗಿದೆ. ಪೊಲೀಸರ ನಿಷ್ಕ್ರಿಯತೆ ಮತ್ತು ಮೇಲ್ವಿಚಾರಣೆಯ ಕೊರತೆಯು ಆರೋಪಿಗಳು ಹಲವಾರು ಉದ್ಯೋಗ ಆಕಾಂಕ್ಷಿಗಳಿಗೆ 1.82 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಲು ಅವಕಾಶ ನೀಡಿದಂತಾಗಿದೆ
ಪ್ರಸ್ತುತ ಬರ್ಕೆ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿರುವ ಮತ್ತು ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 235/2024 ರಲ್ಲಿ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಶ್ರೀ ಉಮೇಶ್ ಕುಮಾರ್ ಎಂ.ಎನ್. ಅವರನ್ನು ಬಹು ತನಿಖಾ ಲೋಪಗಳಿಗಾಗಿ ಅಮಾನತುಗೊಳಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ವಿಫಲವಾಗಿರುವುದು, ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಲು, ಸಾಕ್ಷಿಗಳ ಹಾಗೂ ತೊಂದರೆಗೊಳಗಾದವರನ್ನು ವಿಚಾರಣೆ ನಡೆಸಲು ಮತ್ತು ಹಣಕಾಸಿನ ಸುಳಿವುಗಳ ಮೇಲೆ ಕ್ರಮ ಕೈಗೊಳ್ಳುವುದು, ಇದರಿಂದಾಗಿ ತನಿಖೆಗೆ ಗಂಭೀರ ಹಾನಿಯಾಗಿದ್ದು ಇಬ್ಬರೂ ಅಧಿಕಾರಿಗಳು ನಿರ್ಲಕ್ಷ್ಯ, ಬೇಜವಾಬ್ದಾರಿ ಮತ್ತು ಕರ್ತವ್ಯ ಉಲ್ಲಂಘನೆಯನ್ನು ಪ್ರದರ್ಶಿಸಿದ್ದಾರೆ. ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮಗಳನ್ನು ಆರಂಭಿಸಲಾಗಿದೆ.