ಮಂಗಳೂರು : ಬೈಕ್ ಕಳವು ಗೈದ ಆರೋಪಿಯ ಬಂಧನ
ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್‌ನ ಇಡ್ಯಾ, ಕಾಟಿಪಳ್ಳ ನಿವಾಸಿ ಇಬ್ರಾಹಿಂ ಅಲಿಯಾಸ್ ಮೋನು ಬಂಧಿತ ಆರೋಪಿ. ಆರೋಪಿಯು ಡಿ. 8 ರಂದು ಪಂಪ್‌ವೆಲ್ ಪ್ರದೇಶದಲ್ಲಿ ಯಮಹಾ FZ ಬೈಕ್ ಕಳವು ಮಾಡಿದ್ದಾನೆ ಎಂದು ಹೇಳಲಾಗಿದೆ. ಈ ಬೈಕ್ ಎಕ್ಕೂರು ರಾಷ್ಟ್ರೀಯ ಹೆದ್ದಾರಿಯ ವಿ ಕೇರ್ ಗ್ಯಾರೇಜ್ ಬಳಿ ನಿಲ್ಲಿಸಲಾಗಿತ್ತು. ನೇರ ವೈರಿಂಗ್ ಮೂಲಕ ಬೈಕ್ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.
ದೂರಿನ ಆಧಾರದ ಮೇಲೆ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 303(2) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಸಂಬಂಧಿಸಿದಂತೆ ಕ್ರೈಂ ನಂ. 178/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಡಿ. 12 ರಂದು ಬಂಧಿಸಲಾಗಿದ್ದು, ಕಳುವಾದ ಬೈಕ್ ಮತ್ತು ಅಪರಾಧಕ್ಕೆ ಬಳಸಲಾದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಆಸ್ತಿಯ ಮೌಲ್ಯ ಸುಮಾರು ರೂ. 26,000 ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.













