ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ
ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ (MDMA) ಖರೀದಿಸಿ ನಗರದಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಅವರ ವಶದಿಂದ ಒಟ್ಟು 24.57 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ರೂ. 4.35 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ 1: ಆಟೋದಲ್ಲೇ ಮಾದಕ ವಸ್ತು ಮಾರಾಟ
ನವೆಂಬರ್ 4ರಂದು ಮಂಗಳೂರು ಬಂದರು ಮತ್ತು ದಕ್ಕೆಯ ಪ್ರದೇಶದಲ್ಲಿ ಆಟೋದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಅಟೋ ಚಾಲಕ ಅಬ್ದುಲ್ ಸಲಾಮ್ (39), ತಂದೆ ಅಬ್ದುಲ್ ಹಮೀದ್, ವಾಸ ಎಸ್.ಎಚ್.ನಗರ, ದಯಾಂಬು, ಅಡ್ಯಾರ್, ಕಣ್ಣೂರು, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಅವನ ವಶದಿಂದ ರೂ. 1,20,000 ಮೌಲ್ಯದ ಎಂಡಿಎಂಎ, ಆಟೋ ರಿಕ್ಷಾ, ಮೊಬೈಲ್ ಫೋನ್, ತೂಕಮಾಪಕ ಯಂತ್ರ, ಖಾಲಿ ಜಿಪ್ ಲಾಕ್ ಕವರ್ ಸೇರಿದಂತೆ ಒಟ್ಟು ರೂ. 2,30,500 ಮೌಲ್ಯದ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 2: ಬೋಳಿಯಾರು ಪ್ರದೇಶದಲ್ಲಿ ಮತ್ತೊಬ್ಬನ ಬಂಧನ
ನವೆಂಬರ್ 6ರಂದು ಬೋಳಿಯಾರು ಪ್ರದೇಶದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ನಾಸೀರ್ ಅಲಿಯಾಸ್ ಶಾಕೀರ್ ಅಲಿಯಾಸ್ ಚಾಕಿ (28), ತಂದೆ ದಿ. ಅಬ್ದುಲ್ ರೆಹಮಾನ್, ವಾಸ ಜಾರದಗುಡ್ಡೆ ಹೌಸ್, ಬೋಳಿಯಾರು, ಉಳ್ಳಾಲ ತಾಲೂಕು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅವನ ವಶದಿಂದ ರೂ. 1,20,000 ಮೌಲ್ಯದ ಎಂಡಿಎಂಎ, ಕಪ್ಪು ಬಣ್ಣದ ಯಮಹಾ FZ ಬೈಕ್, ಮೊಬೈಲ್ ಫೋನ್, ಖಾಲಿ ಜಿಪ್ ಲಾಕ್ ಕವರ್ ಸೇರಿದಂತೆ ಒಟ್ಟು ರೂ. 2,05,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













