ಮಂಜನಾಡಿಯಿಂದ ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ

Spread the love

ಮಂಜನಾಡಿಯಿಂದ ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ; ಪತ್ತೆಗೆ ಪೊಲೀಸರ ಮನವಿ

ಮಂಗಳೂರು: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದಿಂದ ಮಸೀದಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದ 40 ವರ್ಷದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು, ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ನಾಪತ್ತೆಯಾದ ವ್ಯಕ್ತಿಯನ್ನು ಮೊಹಮ್ಮದ್ ಅಶ್ರಫ್ (40), ದಿ. ಮೊಯಿದ್ದೀನ್ ಕುಂಞ್ ಅವರ ಪುತ್ರ, ಮಂಜನಾಡಿ ಗ್ರಾಮದ ಮಂಗಳಾಂತಿ ಕ್ವಾಟ್ರಸ್ ನಿವಾಸಿ ಎಂದು ಗುರುತಿಸಲಾಗಿದೆ.

ಜುಲೈ 1ರಂದು ನಾಸಿರುದ್ದೀನ್ ಕೆ. ಅವರು ನೀಡಿದ ದೂರಿನ ಪ್ರಕಾರ, ಮೊಹಮ್ಮದ್ ಅಶ್ರಫ್ ಅವರು ಜೂನ್ 30ರಂದು ಬೆಳಗ್ಗೆ ಸುಮಾರು 4.30ಕ್ಕೆ ತಮ್ಮ ಮೊಬೈಲ್ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು, ಕೆಎ-19-ಎಚ್‌ಇ-5175 ಸಂಖ್ಯೆಯ ಸ್ಕೂಟರ್‌ನಲ್ಲಿ ಉರುಮನೆ ಮಸೀದಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು. ಆದರೆ ಅವರು ಮಸೀದಿಗೆ ತಲುಪಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಅವರ ಪತ್ನಿ ಆಸ್ಮಾ ಅವರು ಕುಟುಂಬದವರಿಗೆ ಮಾಹಿತಿ ನೀಡಿದ್ದು, ಬಳಿಕ ಸಂಬಂಧಿಕರು ಉರುಮನೆ ಮಸೀದಿ, ಅವರು ಕೆಲಸ ಮಾಡುತ್ತಿದ್ದ ಬೆಳ್ಮ ಗ್ರಾಮದ ಪೋಯಿದಲ್ ತಕ್ವಾ ಮಸೀದಿ, ಈ ಹಿಂದೆ ಸೇವೆ ಸಲ್ಲಿಸಿದ್ದ ತಲಪಾಡಿಯ ಪೂಮಣ್ಣು ಮಸೀದಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 76/2026ರಡಿ ವ್ಯಕ್ತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನಾಪತ್ತೆಯಾದ ವ್ಯಕ್ತಿಯ ವಿವರ
ಹೆಸರು: ಮೊಹಮ್ಮದ್ ಅಶ್ರಫ್
ವಯಸ್ಸು: 40 ವರ್ಷ
ಎತ್ತರ: 5 ಅಡಿ 6 ಇಂಚು
ಮೈಬಣ್ಣ: ಎಣ್ಣೆ ಕಪ್ಪು
ಶರೀರ: ಸಾಧಾರಣ
ಶಿಕ್ಷಣ: 10ನೇ ತರಗತಿ
ಧರಿಸಿದ್ದ ಉಡುಪು: ಬಿಳಿ ಬಣ್ಣದ ಶರ್ಟ್, ಬಿಳಿ ಪಂಚೆ ಹಾಗೂ ಬಿಳಿ ಟೋಪಿ
ತಿಳಿದಿರುವ ಭಾಷೆಗಳು: ಕನ್ನಡ, ಬ್ಯಾರಿ, ತುಳು ಹಾಗೂ ಅರೇಬಿಕ್

ನಾಪತ್ತೆಯಾದ ಮೊಹಮ್ಮದ್ ಅಶ್ರಫ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಮಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆ 0824-2220536 / 9480802350 ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments