ಮಣ್ಣಪಳ್ಳ ಕೆರೆ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಯಶ್ಪಾಲ್ ಸುವರ್ಣ

Spread the love

ಮಣ್ಣಪಳ್ಳ ಕೆರೆ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಯಶ್ಪಾಲ್ ಸುವರ್ಣ

ಉಡುಪಿ: ನಗರಸಭಾ ವ್ಯಾಪ್ತಿಯ ಮಣ್ಣಪಳ್ಳ ಸಮರ್ಪಕ ನಿರ್ವಹಣೆ ಇಲ್ಲದೆ ಸಮಸ್ಯೆಗಳ ಗೂಡಾಗಿದ್ದು ಈಗಾಗಲೇ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಣ್ಣಪಳ್ಳ ಕೆರೆಯನ್ನು ನಗರಸಭೆಗೆ ಹಸ್ತಾಂತರಿಸುವಂತೆ ನಿರ್ಣಯ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದು ಜಿಲ್ಲಾಡಳಿತ ತಕ್ಷಣ ಮಣ್ಣಪಳ್ಳ ಕೆರೆಯನ್ನು ನಗರಸಭೆಗೆ ಹಸ್ತಾಂತರಿಸಲು ಕ್ರಮ ವಹಿಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಮಣ್ಣಪಳ್ಳ ನಗರ ಭಾಗದ ಅತ್ಯಂತ ವಿಶಾಲವಾದ ಏಕೈಕ ಕೆರೆಯಾಗಿದ್ದು, ಪ್ರತಿದಿನ ನೂರಾರು ಮಂದಿ ವಾಯು ವಿಹಾರಕ್ಕೆ ಆಗಮಿಸುತ್ತಿದ್ದು, ಶುಚಿತ್ವ, ದಾರಿದೀಪ, ಕಳೆ ಗಿಡಗಳು ಹಾಗೂ ಭದ್ರತಾ ವ್ಯವಸ್ಥೆ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಜಿಲ್ಲಾಡಳಿತದ ಸುಪರ್ದಿಯಲ್ಲಿರುವ ಮಣ್ಣಪಳ್ಳ ಕೆರೆ ಸೂಕ್ತ ನಿರ್ವಹಣೆಯಿಲ್ಲದೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಣ್ಣಪಳ್ಳ ಕೆರೆ ಹಸ್ತಾಂತರಿಸುವಂತೆ ಕಳೆದ ವರ್ಷವೇ ಪತ್ರ ಬರೆದು ಮನವಿ ಮಾಡಿದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮಣ್ಣಪಳ್ಳ ಕೆರೆಯ ಹೂಳೆತ್ತಿ, ಸ್ವಚ್ಛಗೊಳಿಸಿದ್ದಲ್ಲಿ ಜಲ ವಿಹಾರ/ಕ್ರೀಡೆಗಳಿಗೆ ಅನುಕೂಲ ಆಗಲಿದೆ. ಕೆರೆಯ ಪಾರ್ಶ್ವದಲ್ಲಿ ಕಂಬಳ ಕ್ರೀಡೆಯನ್ನು ಪುನರಪಿ ಪ್ರಾರಂಭಿಸಲು ಅವಕಾಶ ಕಲ್ಪಿಸುವಂತೆ ಬೇಡಿಕೆಯಿದೆ. ಕೆರೆಯ ಸುತ್ತಲೂ ಸುಸಜ್ಜಿತ ವಾಕಿಂಗ್ ಟ್ರ್ಯಾಕ್, ಸೈಕ್ಲಿಂಗ್ ಟ್ರ್ಯಾಕ್, ನಿರ್ಮಿಸಿ ನಾಗರಿಕರಿಗೆ ಉತ್ತಮ ಸೌಲಭ್ಯ ಒದಗಿಸಬೇಕಾಗಿದೆ. ಬಯಲು ರಂಗಮದಿರ, ಕ್ರೀಡಾ ಕಟ್ಟಡ, ಶೌಚಾಲಯಗಳ ನಿರ್ಮಾಣ ಮತ್ತು ಸಮರ್ಪಕ ನಿರ್ವಹಣೆ ಆಗಬೇಕಾಗಿದೆ. ಬೇಸಿಗೆಯಲ್ಲಿ ಸ್ವರ್ಣ ನದಿಯಿಂದ ಪಂಪಿಂಗ್ ಮೂಲಕ ನೀರನ್ನು ಪೂರೈಸಿ, ಅಂತರ್ಜಲ ಹೆಚ್ಚಿಸುವ ಅವಕಾಶ ಇದೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಣ್ಣಪಳ್ಳ ಕೆರೆಯೂ ಸೇರಿದಂತೆ ಕೆರೆಗಳ ನಿರ್ವಹಣೆಗೆ ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಮಣ್ಣಪಳ್ಳ ಕೆರೆಯನ್ನು ಉಡುಪಿ ನಗರಸಭೆಗೆ ಹಸ್ತಾಂತರಿಸಿಕೊಂಡು ನಗರಸಭೆ, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಮತ್ತಿತರ ಅನುದಾನಗಳನ್ನು ಒಗ್ಗೂಡಿಸಿಕೊಂಡು ಕೆರೆಯನ್ನು ಸಮಗ್ರ ಅಭಿವೃದ್ಧಿ ಪಡಿಸಲು ವಿಫುಲ ಅವಕಾಶ ಇದ್ದು ನಗರಸಭೆಗೆ ಮಣ್ಣಪಳ್ಳ ಕೆರೆಯನ್ನು ಹಸ್ತಾಂತರಿಸಿದಲ್ಲಿ ಸಮಗ್ರ ಮತ್ತು ಜನ ಸ್ನೇಹಿ ಅಭಿವೃದ್ಧಿ ಮತ್ತು ನಿರ್ವಹಣೆ ಸಾಧ್ಯವಾಗಲಿದ್ದು, ಈ ಬಗ್ಗೆ ಶೀಘ್ರ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments