ಮಳೆಗಾಲ: ಪ್ರಾಕೃತಿಕ ದುರಂತದಿಂದ ಹಾನಿ ತಪ್ಪಿಸಲು ಈಗಿನಿಂದಲೇ ಕ್ರಮ -ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್
ಮಂಗಳೂರು : ಕಳೆದ ವರ್ಷದಲ್ಲಿ ಅಪಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡು ರಸ್ತೆ, ಸೇತುವೆ ಸೇರಿದಂತೆ ಅನೇಕ ರೀತಿ ಮೂಲ ಸೌಕರ್ಯಗಳಿಗೆ ಹಾನಿ ಉಂಟಾಗಿತ್ತು. ಪ್ರಸುತ್ತ ಸಾಲಿನಲ್ಲಿ ಕಳೆದ ಸಾಲಿಗಿಂತ ಹೆಚ್ಚುವರಿ ಮಳೆಯಾದರೆ ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಸಿದ್ಧತೆಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಮಾಡಿಕೊಂಡಿರಬೇಕು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ವರ್ಷ ಅಧಿಕ ಮಳೆಯಿಂದಾಗಿ ಜಿಲ್ಲೆಯ ಹಲವು ಪ್ರದೇಶದಲ್ಲಿ ಗುಡ್ಡ ಕುಸಿತದಿಂದ ಹಾಗೂ ನೆರೆಯಿಂದ ಜನರು ತೀವ್ರವಾಗಿ ತೊಂದರೆಗೆ ಸಿಲುಕಿದ್ದರು, ಇಂತಹ ಸಂಭಾವ್ಯ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪಾಯದ ಜಾಗದಲ್ಲಿ ಇರುವ ಮನೆಗಳನ್ನು ತೆರೆವುಗೊಳಿಸಿ ಅವರಿಗೆ ಸುರಕ್ಷಿತವಾದ ಜಾಗದಲ್ಲಿ ನೆಲೆಸುವಂತೆ ಸೂಚಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದರು. ಮೇ ತಿಂಗಳ ಅಂತ್ಯದಲ್ಲಿ ಜಿಲ್ಲೆಗೆ ಎನ್.ಡಿ.ಆರ್.ಎಫ್. ತಂಡವು ಆಗಮಿಸಲಿದೆ ಎಂದರು.
ಈ ವರ್ಷ ಅಂತಹ ಯಾವುದೇ ತೊಂದರೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಎಲ್ಲಾ ಕ್ರಮಗಳನ್ನು ವಹಿಸಬೇಕು. ಧಾರಾಕಾರ ಮಳೆಯಿಂದ ಅಪಾಯ ಸಂಭವಿಸುವ ಸ್ಥಳಗಳಲ್ಲಿ ತಕ್ಷಣ ನೆರವಿಗಾಗಿ ಜಿಲ್ಲಾಡಳಿತದಿಂದ ಅಗತ್ಯವಿರುವ ಬೋಟ್, ಲೈಫ್ ಜಾಕೆಟ್, ಟಾರ್ಚ್, ರೋಪ್ ಸೇರಿದಂತೆ ವಿವಿಧ ಉಪಕರಣಗಳನ್ನು ಜಿಲ್ಲಾಡಳಿತ ಒದಗಿಸಲಿದೆ. ಹೆಚ್ಚು ಮಳೆಯಾದರೆ ಜನರಿಗೆ ವ್ಯವಸ್ಥೆ ಕಲ್ಪಿಸಲು ಹಾಸ್ಟೆಲ್, ಸಮುದಾಯ ಭವನ, ಕಲ್ಯಾಣ ಮಂಟಪಗಳನ್ನು ಗುರುತಿಸಿ ಪಟ್ಟಿಯನ್ನು ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಹಶೀಲ್ದಾರ್‍ಗಳಿಗೆ ಸೂಚಿಸಿದರು.
ಕಡಲಕೊರೆತ ತಡೆಯಲು ಎಡಿಬಿ ವತಿಯಿಂದ ಶಾಶ್ವತ ತಡೆಗೋಡೆ ಕಾಮಗಾರಿ ನಡೆಸಿದ ಸ್ಥಳದಲ್ಲಿಯೇ ಕಳೆದ ವರ್ಷ ಮತ್ತೆ ಕಡಲಕೊರೆತ ಕಾಣಿಸಿಕೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಈ ಬಾರಿ ಅಂತಹ ಪ್ರಕರಣ ನಡೆಯದಂತೆ ಮುನ್ನಚ್ಚರಿಕೆ ವಹಿಸಲು ಸೂಚಿಸಿದರು.
ಗ್ಯಾಸ್ ಟ್ಯಾಂಕರ್‍ಗಳು ರಸ್ತೆ ಅಪಘಾತಕ್ಕೀಡಾದ ಸಂದರ್ಭದಲ್ಲಿ ಸಂಬಂಧಪಟ್ಟ ಅನಿಲ ಸಂಸ್ಥೆಗಳು ತ್ವರಿತವಾಗಿ ಪರಿಹಾರ ಕಾರ್ಯಾಚರಣೆ ನಡೆಸಬೇಕು, ಈ ಹಿಂದೆ ಜಿಲ್ಲೆಯಲ್ಲಿ ನಡೆದ ಕೆಲವು ಗ್ಯಾಸ್ ಟ್ಯಾಂಕರ್‍ಗಳ ಅಪಘಾತದಲ್ಲಿ ಸಂಬಂದಿಸಿದ ತೈಲ ಕಂಪೆನಿಗಳು ವಿಳಂಭವಾಗಿ ಸ್ಪಂದಿಸಿದ್ದು, ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕಾದೀತು ಎಂದು ಸಿಂಧೂ ರೂಪೇಶ್ ಎಚ್ಚರಿಸಿದರು. ವಿಶಾಖಪಟ್ಟಣದಲ್ಲಿ ಅನಿಲ ದುರಂತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಅನಿಲ ಸಂಸ್ಥೆಗಳು, ಕಾರ್ಯಚರಣೆಯಲ್ಲಿ ಯಾವುದೇ ಲೋಪವಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ಇದರಲ್ಲಿ ಯಾವುದೇ ರಾಜೀ ಮಾಡಿಕೊಳ್ಳಲಾಗದು ಎಂದು ಅವರು ಸಭೆಯಲ್ಲಿದ್ದ ಅನಿಲ ಸಂಸ್ಥೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಮಾತನಾಡಿ ನಗರದಲ್ಲಿ ಅಪಾರ ಮಳೆಯಿಂದ ತೊಂದರೆಗೀಡಾಗುವ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದೆ. ನಗರದಲ್ಲಿರುವ 11 ರಾಜಾಕಾಲುವೆಗಳ ಹೂಳೆತ್ತಲು ರೂ. 168 ಲಕ್ಷದ ಕಾಮಗಾರಿ ನಡೆಯುತ್ತಿದ್ದು, ಶೇಕಡಾ 80 ರಷ್ಟು ಕಾಮಗಾರಿ ಈಗಾಗಲೇ ಮುಗಿದಿದೆ. 24 ಗಂಟೆಗಳ ಕಂಟ್ರೋಲ್ ರೂಂ ಮಹಾನಗರಪಾಲಿಕೆಯಲ್ಲಿ ತೆರೆಯಲಾಗಿದ್ದು, ಮಳೆಗಾಲದಲ್ಲಿ ಕಾರ್ಯಾಚರಣೆಗೆ ಪ್ರತೀ 6 ವಾರ್ಡುಗಳಿಗೆ ಒಂದು ತಂಡವನ್ನು ರಚಿಸಲಾಗಿದೆ. 16 ಪರಿಹಾರ ಕೇಂದ್ರಗಳನ್ನು ಗುರುತಿಸಿ, ಸಿದ್ಧಪಡಿಸಲಾಗಿದೆ ಎಂದರು. ಜಿಲ್ಲಾಧಿಕಾರಿಗಳು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಪರಿಹಾರ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನೂ ಪಾಲಿಸಲು ಸೂಚಿಸಿದರು. ಅಲ್ಲದೇ, ಕಾರ್ಮಿಕರ ತಂಡವನ್ನು ರಚಿಸಿ ಸದಾ ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ಡಾ. ಸೆಲ್ವಮಣಿ, ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್, ಡಿಸಿಪಿ ಅರುಣಾಂಶ ಗಿರಿ, ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ವಿಜಯಕುಮಾರ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.












