ಮೀನುಗಾರಿಕಾ ಬೋಟ್ಗಳಿಗೆ ನಿರಂತರ ಡೀಸೆಲ್ ಪೂರೈಕೆ – ಸ್ಪೀಕರ್ ಯು.ಟಿ ಖಾದರ್ ಸೂಚನೆ

Spread the love

ಮೀನುಗಾರಿಕಾ ಬೋಟ್ಗಳಿಗೆ ನಿರಂತರ ಡೀಸೆಲ್ ಪೂರೈಕೆ – ಸ್ಪೀಕರ್ ಯು.ಟಿ ಖಾದರ್ ಸೂಚನೆ

ಮಂಗಳೂರು:  ನಗರದ ಮೀನುಗಾರಿಕಾ ಬಂದರಿನಿಂದ ಹೊರಡುವ ಬೋಟ್ಗಳಿಗೆ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ಗಳನ್ನು ನಿರಂತರವಾಗಿ ಒದಗಿಸಲು ಸ್ಪೀಕರ್ ಯು.ಟಿ ಖಾದರ್ ಸೂಚಿಸಿದ್ದಾರೆ.

ಅವರು ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀನುಗಾರಿಕಾ ಸಂಘಟನೆಗಳು, ಬೋಟ್ ಮಾಲಕರು, ತೈಲ ಕಂಪನಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮೀನುಗಾರಿಕಾ ಬೋಟುಗಳಿಗೆ ಯಾವುದೇ ರೀತಿಯಲ್ಲಿ ಡೀಸೆಲ್ ಕೊರತೆಯಾಗದಂತೆ ಸರಬರಾಜು ಮಾಡಬೇಕು. ಹಳೆ ಬಂದರಿನಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಡೀಸೆಲ್ ಔಟ್ಲೆಟ್ ಅನ್ನು ಪುನಃ ತೆರೆಯಬೇಕು. ಇದಕ್ಕೆ ಅಗತ್ಯವಾದ ಕೋಡ್ ಸಂಖ್ಯೆಯನ್ನು ತುರ್ತಾಗಿ ನೀಡುವಂತೆ ಮೀನುಗಾರಿಕೆ ನಿರ್ದೇಶಕರಿಗೆ ಸೂಚಿಸಿದರು. ಅಲ್ಲಿಗೆ ಡೀಸೆಲ್ ಸರಬರಾಜು ಮಾಡಬೇಕು ಎಂದು ಅವರು ತೈಲ ಕಂಪೆನಿಗಳಿಗೆ ತಿಳಿಸಿದರು.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಂತರ ಮೀನುಗಾರಿಕಾ ಬೋಟ್ಗಳಿಗೆ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದರಿಂದ ಮೀನುಗಾರಿಕಾ ಬೋಟ್ಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಮೀನುಗಾರಿಕಾ ಉದ್ಯಮ ತೀರ ಸಮಸ್ಯೆ ಎದುರಿಸುತ್ತಿದೆ ಎಂದು ಮೀನುಗಾರ ಮುಖಂಡರು ಸಭೆಯಲ್ಲಿ ತಿಳಿಸಿದರು. ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಮಾತನಾಡಿ, ಡೀಸೆಲ್ ದರ ಹೆಚ್ಚಳದಿಂದ ಆಗುವ ನಷ್ಟವನ್ನು ಸರ್ಕಾರವು ಭರಿಸಬೇಕೆಂದು ಕೋರಿದರು.

ತೈಲ ಕಂಪೆನಿಗಳ ಪ್ರತಿನಿಧಿಗಳು ಮಾತನಾಡಿ, ಈಗಾಗಲೇ ಕೇಂದ್ರ ಸರ್ಕಾರದ ಸುತ್ತೋಲೆಯನ್ವಯ, ಒಟ್ಟು ವಿತರಣೆಯ ಶೇಕಡಾ 20ರಷ್ಟು ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಇಂದಿರಾ ಕ್ಯಾಂಟೀನ್, ರೆಸ್ಟೋರೆಂಟ್ ಮತ್ತು ಮೀನುಗಾರಿಕೆ ಮುಂತಾದವುಗಳು ಇರುವುದರಿಂದ ಆದ್ಯತೆಯಲ್ಲಿ ಪರಿಗಣಿಸಿ ಎಲ್.ಪಿ.ಜಿ ಸಿಲಿಂಡರ್ಗಳನ್ನು ವಿತರಿಸುವುದಾಗಿ ತಿಳಿಸಿದರು.

ಅದೇ ರೀತಿ ಮೀನುಗಾರರು ಮೀನುಗಾರಿಕೆಗೆ ತೆರಳುವಾಗ ಅಡುಗೆಗಾಗಿ ಕೊಂಡೊಯ್ಯುವ ಎಲ್.ಪಿ.ಜಿ ಸಿಲಿಂಡರ್ಗಳಲ್ಲಿಯೂ ಯಾವುದೇ ಕೊರತೆಯಾಗದಂತೆ ಕನಿಷ್ಠ 130 ರಿಂದ 150 ಸಿಲಿಂಡರ್ಗಳನ್ನು ಮೀನುಗಾರರಿಗೆ ಸರಬರಾಜು ಮಾಡುವಂತೆ ನೋಡಿಕೊಳ್ಳಬೇಕು. ಧÀಕ್ಕೆಯಿಂದ ಹೊರಡುವ ಬೋಟ್ಗಳಿಗೆ ಪ್ರತಿ ಬೋಟ್ಗೆ 1 ಸಿಲಿಂಡರ್ನಂತೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಸಿಲಿಂಡರ್ ಒದಗಿಸಲು ಸ್ಪೀಕರ್ ಸೂಚಿಸಿದರು.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿ ಪ್ರತಿ ಜಿಲ್ಲೆಗೆ ನೀಡುವ ಕೋಟಾದಲ್ಲಿ ಮೀನುಗಾರಿಕೆಗಾಗಿ 130 ರಿಂದ 150 ಸಿಲಿಂಡರ್ಗಳನ್ನು ಮೀನುಗಾರರಿಗೆ ಒದಗಿಸುವಂತೆ ಮತ್ತು ಈ ಬಗ್ಗೆ ಮೀನುಗಾರಿಕಾ ಅಧಿಕಾರಿಗಳು ತೈಲ ಕಂಪೆನಿಗಳೊಂದಿಗೆ ವ್ಯವಹರಿಸಲು ಸೂಚಿಸಿದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ನಿಗಮದ ಮೂಲಕ ಡೀಸೆಲ್ ವಿತರಣೆ ಏಜನ್ಸಿ ಈಗಾಗಲೇ ಇದ್ದು, ಇದಕ್ಕಾಗಿ ಕೋಡ್ ನಂಬರ್ ಪಡೆದ ನಂತರ ಇಲಾಖೆಯಿಂದ ಡೀಸೆಲ್ ಕೋಟಾ ಪಡೆದು ಮೀನುಗಾರರಿಗೆ ಡೀಸೆಲ್ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments