ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ – ಜನವರಿ ತಿಂಗಳ ಸ್ವಚ್ಛತಾ ಶ್ರಮದಾನ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಜನವರಿ ತಿಂಗಳ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಜರುಗಿತು. ಈ ತಿಂಗಳ ಸ್ವಚ್ಛತಾ ಶ್ರಮದಾನವನ್ನು ಸೆಂಟ್ ಅಲೋಶಿಯಸ್ ಕೋಟೇಕಾರ್ ಬೀರಿ ಕ್ಯಾಂಪಸ್‌ನ ಫಾದರ್ ಅವಿನಾಶ್ ಡಿಸೋಜಾ ಮತ್ತು ಹಿರಿಯ ಸ್ವಯಂಸೇವಕರಾದ ಅನಿರುದ್ಧ ನಾಯಕ್ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ತಾರಾನಾಥ್ ಆಳ್ವ, ಉದಯ ಕೆ.ಪಿ. ಸೇರಿದಂತೆ ಹಲವು ಹಿರಿಯ ಸ್ವಯಂಸೇವಕರು ಈ ಸಂದರ್ಭ ಹಾಜರಿದ್ದರು. ಈ ತಿಂಗಳ ಶ್ರಮದಾನವು ವಿಶೇಷವಾಗಿದ್ದು, ಸಂಪೂರ್ಣವಾಗಿ ಬೀಚ್ ಕ್ಲೀನಿಂಗ್ ಮೇಲೆಯೇ ಕೇಂದ್ರೀಕೃತವಾಗಿತ್ತು. ಸಮುದ್ರತೀರದ ಸಂರಕ್ಷಣೆ ಮತ್ತು ಕಡಲತೀರದ ಪ್ಲಾಸ್ಟಿಕ್ ಮಾಲಿನ್ಯ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಧ್ಯೇಯವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಫಾದರ್ ಅವಿನಾಶ್ ಡಿಸೋಜಾ, “ಸ್ವಚ್ಛತೆ ದೇವರ ಸಮೀಪಕ್ಕೆ ಕರೆದೊಯ್ಯುವ ಮಾರ್ಗ. ಯುವಕರು ಇಂತಹ ಶ್ರೇಷ್ಠ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರಕೃತಿಯ ರಕ್ಷಣೆ ಮಾಡುವ ಈ ಸೇವೆಯು ಅತ್ಯಂತ ಮುಖ್ಯ” ಎಂದು ಹೇಳಿದರು.
ಸೆಂಟ್ ಅಲೋಶಿಯಸ್ ಪಿಜಿ ಸೆಂಟರ್‌ನ ಪ್ರಾದ್ಯಾಪಕರಾದ ಗೌತಮಿ, ರಚನಾ, ಮಹಾಲಕ್ಷ್ಮಿ ಮತ್ತು ಶ್ರೀಶ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಸ್ವಯಂಸೇವಕರ ತಂಡವು ಕಡಲ ತೀರದಲ್ಲಿ ಜಮೆಗೊಂಡ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು ಮತ್ತು ಅನರ್ಹ ಕಸಗಳನ್ನು ಶ್ರಮಪೂರಿತವಾಗಿ ತೆರವುಗೊಳಿಸಿತು. ಸಮುದ್ರತೀರದ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಜನ ಜಾಗೃತಿ ಮೂಡಿಸಲಾಯಿತು.

ಇನ್ನೊಂದು ತಂಡದಲ್ಲಿ ಹಿರಿಯ ಸ್ವಯಂಸೇವಕರಾದ ಉದಯ ಕೆ.ಪಿ., ತಾರಾನಾಥ್ ಆಳ್ವ, ಶ್ರೀಧರ್, ರಾಜೀವಿ ಚಂದ್ರಶೇಖರ್, ಪ್ರಕಾಶ್ ಮತ್ತು ಬಬಿತಾ ಶೆಟ್ಟಿ ಮತ್ತೊಂದು ವಿದ್ಯಾರ್ಥಿ ತಂಡದೊAದಿಗೆ ಸೇರಿ, ಸಮುದ್ರ ತೀರಕ್ಕೆ ಬಂದು ಸೇರಿದ್ಧ ಥರ್ಮೋಕೋಲ್, ಮರದ ತ್ಯಾಜ್ಯ, ಪ್ಲಾಸ್ಟಿಕ್, ಚಪ್ಪಲಿ, ಬಾಟಲಿಗಳು ಮತ್ತು ಕಸದ ರಾಶಿಗಳನ್ನು ತೆರವುಗೊಳಿಸಿದರು.
ಮಂಗಳೂರಿನ ನಾಗರಿಕರು ಪ್ರತಿ ತಿಂಗಳು ನಡೆಯುವ ಈ ಶ್ರಮದಾನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿ, ಸ್ವಚ್ಛ ಮತ್ತು ಜವಾಬ್ದಾರಿಯುತ ನಗರ ನಿರ್ಮಿಸಲು ಕೈಜೋಡಿಸಬಹುದು. ಈ ಅಭಿಯಾನವನ್ನು ಸ್ವಚ್ಛ ಮಂಗಳೂರು ಪ್ರತಿಷ್ಠಾನ ಸಹಯೋಗದೊಂದಿಗೆ, ಎಂಆರ್‌ಪಿಎಲ್–ಓಎನ್‌ಜಿಸಿಯ ಪರಿಸರ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ನಡೆಯಿತು.

ಸ್ವಚ್ಛತೆಯಲ್ಲಿ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳ ಭಾಗಿ:
ಬಂಟ್ವಾಳ ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕದ ಸಿಬ್ಬಂದಿಗಳು ಬೀಚ್ ಕ್ಲೀನಿಂಗ್ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸಚಿನ್ ಶೆಟ್ಟಿ, ನವನೀತ್, ವರುಣ್, ರಾಘವೇಂದ್ರ ಮತ್ತು ಹರ್ಷ ಕಾರ್ಯಕ್ರಮವನ್ನು ಸಮನ್ವಯಗೊಳಿಸಿ, ಸಂಗ್ರಹಿಸಿದ ತ್ಯಾಜ್ಯವನ್ನು ಸೂಕ್ತವಾಗಿ ವರ್ಗೀಕರಿಸಿ ಸಾಗಣೆಯ ಕಾರ್ಯವನ್ನು ನಿರ್ವಹಿಸಿದರು. ರಿಪರ್ಪಸ್ ಗ್ಲೋಬಲ್ ಮತ್ತು ಸತ್ತ್ವ ನಾಲೆಜ್ ರಿಯಾಲಿಟಿ ಟ್ರಸ್ಟ್ ಪ್ರತಿನಿಧಿಗಳೂ ಸಹ ಈ ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.












