ರಾಷ್ಟ್ರೀಯ ಹೆದ್ದಾರಿ 66 ಗುಂಡಿಗಳ ವಿರುದ್ಧ ಸೆ.12ರಂದು ಕಾಂಗ್ರೆಸ್ ಪ್ರತಿಭಟನೆ – ಕೆ. ಹರೀಶ್ ಕುಮಾರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಸೆಪ್ಟೆಂಬರ್ 12ರಂದು ಬೆಳಿಗ್ಗೆ ನಂತೂರ್ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ದುಸ್ಥಿತಿ ವಿರುದ್ಧ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಘೋಷಿಸಿದರು.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿಭಟನೆಯ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ತೆರಳಿ ರಸ್ತೆ ದುರಸ್ತಿ ಆಗ್ರಹಿಸಿ ಮನವಿ ಸಲ್ಲಿಸಲಾಗುವುದು ಎಂದರು.
ಇತ್ತೀಚೆಗೆ ಹೆದ್ದಾರಿಯ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರೆ ಮಾಧವಿ ಮೃತಪಟ್ಟ ಘಟನೆಗೆ ಸಂಬಂಧಿಸಿ, “ಬಿಜೆಪಿ ನಾಯಕರು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಧ್ವನಿಯೆತ್ತಿಲ್ಲ. ಹಿಂದೂ ಮಹಿಳೆ ಮೃತಪಟ್ಟಿದ್ದರೂ ರಾಜ್ಯ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ, ನಾಯಕರಾದ ಸಿ.ಟಿ. ರವಿ, ನಾರಾಯಣಸ್ವಾಮಿ ಯಾಕೆ ಬಂದಿಲ್ಲ?” ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
“ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಬಳಿಕ ಪೊಲೀಸ್ ಇಲಾಖೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಇದರಿಂದ ಜನರಲ್ಲಿ ಶಾಂತಿ ನೆಲೆಸಿದೆ. ಡ್ರಗ್ಸ್ ಪೂರೈಕೆ, ಮಟ್ಯಾ ಸ್ಕಿಲ್ ಗೇಮ್, ಜುಗಾರಿ, ಇಸ್ಪೇಟ್ ಸೇರಿದಂತೆ ಅಕ್ರಮ ಚಟುವಟಿಕೆಗಳು ಬಂದ್ ಆಗಿವೆ. ಹಿಂಸಾತ್ಮಕ, ಕೋಮು ದ್ವೇಷದ ಭಾಷಣಗಳಿಗೂ ಪೊಲೀಸರು ಕಡಿವಾಣ ಹಾಕಿದ್ದಾರೆ” ಎಂದು ಹೇಳಿದರು.
ಗಣೇಶೋತ್ಸವ ಶಾಂತಿಯುತವಾಗಿ ನಡೆದಿರುವುದನ್ನು ಉಲ್ಲೇಖಿಸಿದ ಅವರು, ಡಿಜೆಗೆ ಅವಕಾಶ ನೀಡದಿರುವುದು ಸ್ವಾಗತಾರ್ಹ ಎಂದರು. “ಸಣ್ಣಪುಟ್ಟ ತೊಂದರೆಗಳಿದ್ದರೂ ಜಿಲ್ಲಾಮಂತ್ರಿ ಮಧ್ಯಸ್ಥಿಕೆ ವಹಿಸಿ ಸರಿಪಡಿಸುವ ಭರವಸೆ ನೀಡಿದ್ದಾರೆ” ಎಂದರು.
“ಕೇಂದ್ರ ಸರಕಾರ ಜಿಎಸ್ಟಿ ದರ ಇಳಿಸಿರುವುದು ಸ್ವಾಗತಾರ್ಹ. ಇದು ಕಾಂಗ್ರೆಸ್ ಪಕ್ಷದ ಚಿಂತನೆಯ ಜಯ. ಜನರ ತೊಂದರೆ ನಿವಾರಣೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟ ನಡೆಸಿದ್ದರು. ಇಂದಿನ ನಿರ್ಧಾರವು ಅವರ ಹೋರಾಟಕ್ಕೆ ಸಂದ ಜಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿಕಾಶ್ ಶೆಟ್ಟಿ, ನೀರಜ್ಜಂದ್ರ ಪಾಲ್, ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು.