ವಿದೇಶದಲ್ಲಿ ಉದ್ಯೋಗದ ವೀಸಾ ಆಮಿಷವೊಡ್ಡಿ 289 ಮಂದಿಗೆ ಕೋಟ್ಯಂತರ ರೂ. ವಂಚನೆ: ಇಬ್ಬರು ಆರೋಪಿಗಳ ಸೆರೆ
ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಕೊಡುವುದಾಗಿ ಆಮಿಷವೊಡ್ಡಿ 289 ಮಂದಿಯಿಂದ ಕೋಟ್ಯಂತರ ರೂ. ವಂಚಿಸಿದ ಮುಂಬೈ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಂಬೈಯ ದಿಲ್ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಮತ್ತು ಸಾಹುಕಾರಿ ಕಿಶೋರ್ ಕುಮಾರ್ ಯಾನೆ ಅನಿಲ್ ಪಾಟೀಲ್ (34)ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಪೊಲೀಸರು ಮುಂಬೈ ಮೂಲದ ಮಸೀವುಲ್ಲಾ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಆತನೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
*ಪ್ರಕರಣದ ವಿವರ: ನಗರ ಬೆಂದೂರ್ ವೆಲ್ ಎಂಬಲ್ಲಿ ಕಚೇರಿಯೊಂದನ್ನು ತೆರೆದಿದ್ದ ಆರೋಪಿಗಳು ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸಿ ಬಳಿಕ 289 ಮಂದಿಯಿಂದ ಒಟ್ಟು 4.50 ಕೋಟಿ ರೂ. ಪಡೆದು ವೀಸಾ ಕೊಡದೆ ವಂಚಿಸಿದ್ದರು. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.