ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ; ಮುಂಬೈ ವಿಮಾನ ನಿಲ್ದಾಣದಲ್ಲಿ ಅರೆಸ್ಟ್
ಮಂಗಳೂರು: ಕಂಕನಾಡಿ ನಗರ ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈನ ಅಂಧೇರಿ ಪಶ್ಚಿಮದ ನಿವಾಸಿ ಅಶೋಕ್ ನಾರಾಯಣ್ (63)ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ದಾಖಲಾದ ದಿನದಿಂದ ಆತ ತಲೆಮರೆಸಿಕೊಂಡಿದ್ದು, ಬಂಧನದಿಂದ ತಪ್ಪಿಸಿಕೊಂಡಿದ್ದ, ಅಲ್ಲದೆ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ವಿಳಾಸ ಬದಲಾಯಿಸಿ ತಲೆಮರೆಸಿಕೊಂಡಿದ್ದ ಆತನ ವಿರುದ್ಧ ಆರೋಪ ಪಟ್ಟಿ ಹಾಕಲಾಗಿತ್ತು.
ತನಿಖೆಯ ವೇಳೆ ಆರೋಪಿ ವಿದೇಶಕ್ಕೆ ಹೋಗಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿತ್ತು. ಬಳಿಕ ಆತನ ಪಾಸ್ಪೋರ್ಟ್ ವಿವರಗಳನ್ನು ಪಡೆದ ನಂತರ, ಪೊಲೀಸ್ ಆಯುಕ್ತರ ಕಚೇರಿಯ ಮೂಲಕ ಎಲ್ಓಸಿ ಹೊರಡಿಸಲಾಗಿತ್ತು.
ಆಗಸ್ಟ್ 1 ರಂದು ಆರೋಪಿ ವಿದೇಶದಿಂದ ಭಾರತಕ್ಕೆ ಬಂದ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದ್ದು, ಆಗಸ್ಟ್ 2 ರಂದು ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಎಸ್ಐ ಜಗದೀಶ್ ಮತ್ತು ರವಿಕುಮಾರ್ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.













