ವಿದ್ಯೆಯ ಮಹತ್ವ ಅರಿತು ಮುನ್ನಡೆಯಿರಿ – ಡಾ. ಕೇಶವ ಪಾಟ್ಕರ್  

Spread the love

ವಿದ್ಯೆಯ ಮಹತ್ವ ಅರಿತು ಮುನ್ನಡೆಯಿರಿ – ಡಾ. ಕೇಶವ ಪಾಟ್ಕರ್  

ಬಂಟಕಲ್ಲು: “ಶ್ರದ್ಧೆ ಮತ್ತು ಗುರಿಯನ್ನಿಟ್ಟುಕೊಂಡು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಜೀವನದಲ್ಲಿ ಖಂಡಿತವಾಗಿ ಯಶಸ್ಸು ಕಾಣುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯೆಯ ಮಹತ್ವವನ್ನು ಅರಿತು ಮುಂದಕ್ಕೆ ಸಾಗಬೇಕು,” ಎಂದು ಬೆಂಗಳೂರು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಡಾ. ಕೇಶವ ಪಾಟ್ಕರ್ ವಿದ್ಯಾರ್ಥಿಗಳಿಗೆ ಕರೆನೀಡಿದರು.

ಅವರು ಶ್ರೀ ಆರ್.ಕೆ. ನಾಯಕ್ ಮತ್ತು ರಮಾದೇವಿ ಸಮಾಜ ಸೇವಾ ನಿಧಿ ಹಾಗೂ ರಾಜಾಪುರ ಸಾರಸ್ವತ ಸಮಾಜ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಚಿತ ವಿದ್ಯಾರ್ಥಿ ವೇತನ ಹಾಗೂ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಧನಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಕಾರ್ಯಕ್ರಮವು ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಆರಂಭದಲ್ಲಿ ಫಲಾನುಭವಿ ವಿದ್ಯಾರ್ಥಿನಿ ಕು. ಶಿವಾನಿ ಪ್ರಭು ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಶ್ರೀ ಗುರುರಾಜ್ ನಾಯಕ್ ಎಲ್ಲರಿಗೂ ಸ್ವಾಗತ ಕೋರಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಶಿಕ್ಷಕರೂ ಪ್ರಸಿದ್ಧ ಜ್ಯೋತಿಷಿಗಳೂ ಆಗಿರುವ ಶ್ರೀ ಉಪೇಂದ್ರ ಪ್ರಭು (ಮಾಣ್ಯೂರು) ಅವರು ಮಾತನಾಡಿ, “ಪ್ರತಿಯೊಬ್ಬನಿಗೂ ಜೀವನದಲ್ಲಿ ಗುರು ಮತ್ತು ಗುರಿ ಎರಡೂ ಅಗತ್ಯ. ಈ ಎರಡನ್ನು ಅಳವಡಿಸಿಕೊಂಡು ಹೆಜ್ಜೆ ಇಡುವವನು ಖಂಡಿತವಾಗಿ ಯಶಸ್ಸನ್ನು ಕಾಣುತ್ತಾನೆ,” ಎಂದು ಹೇಳಿದರು.

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ  ಜಯರಾಮ ಪ್ರಭು (ಗಂಪದಬೈಲು) ಅವರು ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಆರ್.ಕೆ. ನಾಯಕ್ ಮತ್ತು ರಮಾದೇವಿ ನಾಯಕ್ ದಂಪತಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 30 ಮಂದಿ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಹಾಗೂ ಇಬ್ಬರು ರೋಗಿಗಳಿಗೆ ಧನಸಹಾಯ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ನಿವೃತ್ತ ಶಿಕ್ಷಕರೂ ಹಿರಿಯ ಪತ್ರಕರ್ತರೂ ಆಗಿರುವ ಪುಂಡಲೀಕ ಮರಾಠೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ಗೀತಾ ವಾಗ್ಳೆ ನಿರೂಪಿಸಿ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments