ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ಸ್ವಚ್ಛತಾ ಪೌರ ಕಾರ್ಮಿಕರ ಕಾಲ್ನಡಿಗೆ ಜಾಥಾ, ಧರಣಿ

Spread the love

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ಸ್ವಚ್ಛತಾ ಪೌರ ಕಾರ್ಮಿಕರ ಕಾಲ್ನಡಿಗೆ ಜಾಥಾ, ಧರಣಿ

ಮಂಗಳೂರು: ದ.ಕ. ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ಕೆಲಸ ಮಾಡುತ್ತಿರುವ ಸ್ವಚ್ಚತಾ ಪೌರ ಕಾರ್ಮಿಕರು, ಸ್ವಚ್ಛತಾ ವಾಹನಗಳ ಮಹಿಳಾ ಚಾಲಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕಾಲ್ನಡಿಗೆ ಜಾಥಾ ನಡೆಸಿ, ದ.ಕ. ಜಿಲ್ಲಾ ಪಂಚಾಯತ್ ಮುಂದೆ ಧರಣಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ಪತ್ರಿಕಾ ಭವನದ ಬಳಿಯಿಂದ ಜಿಲ್ಲಾ ಪಂಚಾಯತ್ ತನಕ ಕಾಲ್ನಡಿಗೆ ಜಾಥಾದಲ್ಲಿ ತೆರಳಿದ ಪೌರ ಕಾರ್ಮಿಕರು, ಜಿಲ್ಲಾ ಪಂಚಾಯತ್ ಎದುರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದರು.

ಸ್ವಚ್ಛತಾ ಪೌರ ಕಾರ್ಮಿಕರು, ಸ್ವಚ್ಛತಾ ವಾಹನಗಳ ಮಹಿಳಾ ಚಾಲಕರನ್ನು ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರಿಂದ ಬಿಡುಗಡೆಗೊಳಿಸಿ, ಪಂಚಾಯತ್ ಪೌರ ಕಾರ್ಮಿಕರೆಂದು ಪರಿಗಣಿಸಿ, ನೇರ ವೇತನ ಪಾವತಿಸಬೇಕು. ಹಲವಾರು ವರ್ಷಗಳಿಂದ ಪಂಚಾಯತ್ ಗಳಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಮಿಕರು, ವಾಹನ ಚಾಲಕಿಯರನ್ನು ಖಾಯಂಗೊಳಿಸಬೇಕು. ಆರೋಗ್ಯ ತಪಾಸಣೆ, ಆರೋಗ್ಯ ಕಾರ್ಡ್, ಇಎಸ್‌ಐ, ಪಿಎಫ್ ಸವಲತ್ತು. ಮಾಸ್ಕ್ ಗೌಸ್ ಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಸಂಜೀವಿನಿ ಒಕ್ಕೂಟದ ಗುತ್ತಿಗೆದಾರರು ಪರಿಶಿಷ್ಟ ಸಮುದಾಯದ ಕಾರ್ಮಿಕರಿಗೆ ಶೋಷಣೆ ಮಾಡುತ್ತಿದ್ದಾರೆ. ಸಂಜೀವಿನಿ ಒಕ್ಕೂಟದ ದಬ್ಬಾಳಿಕೆಯಿಂದ ಕಾರ್ಮಿಕರನ್ನು ಬಿಡುಗಡೆಗೊಳಿಸಿ, ಗ್ರಾಮ ಪಂಚಾಯಿತಿಯಿಂದ ನೇರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಸ್ವಚ್ಛತಾ ಕಾರ್ಮಿಕರು ಸಂಜೀವಿನಿ ಒಕ್ಕೂಟದ ಗುತ್ತಿಗೆ ಅಡಿಯಲ್ಲಿ 300 ದಿನಗೂಲಿ ಪಡೆಯುತ್ತಿದ್ದಾರೆ. ಕನಿಷ್ಠ ವೇತನ, ಇಎಸ್‌ಐ, ಪಿಎಫ್, ಮಾಸ್ಕ್ ಮುಂತಾದ ಮೂಲಭೂತ ಕಾರ್ಮಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದರು.

ಕಾರ್ಮಿಕ ಮುಖಂಡ ಪ್ರೇಮ್ ಕುಮಾರ್ ಬಲ್ಲಾಳ್ವಾಗ್, ಪಾಣಾಜೆ ಗ್ರಾಪಂ ವಾಹನ ಚಾಲಕಿ ಪೌಲಿನ್ ಮೊಂತೆರೊ, ತಾಲೂಕಿನ ಪ್ರಮುಖರಾದ ರೇಣುಕಾ ಬೆಳ್ತಂಗಡಿ, ಅಕ್ಷತಾ ಬಂಟ್ವಾಳ, ನಯನ ಸುಳ್ಯ, ಮೂಡಬಿದ್ರೆ ಅನಿತ ಹೇಮಾ ವಿ ಕಡಬ, ಚಂದ್ರಾವತಿ ಪುತ್ತೂರು ನೇತೃತ್ವ ವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments