ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಜಾತಿ ನಿಂದನೆಯ ಸಂದೇಶ: ಆರೋಪಿ  ನಿಖಿಲ್ ರಾಜ್ ಬಂಧನ

Spread the love

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಗೆ ಜಾತಿ ನಿಂದನೆಯ ಸಂದೇಶ: ಆರೋಪಿ  ನಿಖಿಲ್ ರಾಜ್ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ವಿರುದ್ಧ ಜಾತಿ ನಿಂದನೆಯ ಚ್ಯುತಿ ಬರುವಂತೆ ಸಂದೇಶ ರವಾನಿಸಿದ ಆರೋಪದ ಮೇಲೆ ಮಂಗಳೂರಿನ ಕಾವೂರು ನಿವಾಸಿ ನಿಖಿಲ್ ರಾಜ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣವು 2025ರ ಅಕ್ಟೋಬರ್ 18ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 146/2025, ಕಲಂ 79, 190 ಬಿ.ಎನ್.ಎಸ್, 66(ಎ), 67 ಐಟಿ ಆಕ್ಟ್ ಮತ್ತು 3(1)(w)(i)(ii) ಎಸ್‌ಸಿ/ಎಸ್‌ಟಿ ಕಾಯ್ದೆಗಳ ಅಡಿಯಲ್ಲಿ ದಾಖಲಿಸಲ್ಪಟ್ಟಿದೆ.

ದೂರುದಾರರ ಪ್ರಕಾರ, ಕಾರ್ಕಳ ನಿಟ್ಟೆ ಗ್ರಾಮದ ಅಭಿಷೇಕ್ ಆಚಾರ್ಯ ಎಂಬಾತನು ದೂರುದಾರರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಆತ ಆತ್ಮಹತ್ಯೆ ಮಾಡಲು ಮೊದಲು ನೇಣು ಹಾಕಿರುವ ಫೋಟೋವನ್ನು ದೂರುದಾರರಿಗೆ ಕಳುಹಿಸಿದ್ದನು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ನಂತರ, ಅಭಿಷೇಕ್ ಆಚಾರ್ಯನ ತಮ್ಮ ಅಭಿಜಿತ್ ಆಚಾರ್ಯ ಹಾಗೂ ಇತರರು ಅಭಿಷೇಕ್ ಬರೆದಿದ್ದ ಡೆತ್ ನೋಟ್ ಹಾಗೂ ದೂರುದಾರರ ಅಶ್ಲೀಲ ಫೋಟೋಗಳನ್ನು ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಪ್‌ ಗ್ರೂಪ್‌ಗಳಲ್ಲಿ ವೈರಲ್ ಮಾಡಿ ದೂರುದಾರರ ಮಾನಹಾನಿ ಮಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.

ದೂರುದಾರರು ಪರಿಶಿಷ್ಟ ಜಾತಿಗೆ ಸೇರಿದ್ದು, ಈ ರೀತಿಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವ ಮೂಲಕ ಜಾತಿ ನಿಂದನೆಯ ಚ್ಯುತಿ ಉಂಟುಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ತನಿಖೆಯ ವೇಳೆ, ಅಭಿಷೇಕ್ ಆಚಾರ್ಯನ ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೆಲವು ಸಂದೇಶಗಳಲ್ಲಿ ಜಾತಿ ನಿಂದನೆಯ ಶಬ್ದಗಳನ್ನು ಬಳಕೆ ಮಾಡಿರುವುದಕ್ಕೆ ಸಾಕ್ಷ್ಯಾಧಾರಗಳು ದೊರೆತಿವೆ.

ಈ ಹಿನ್ನೆಲೆಯಲ್ಲಿ ಆಪಾದಿತ ನಿಖಿಲ್ ರಾಜ್ (27), ವಾಸ: ಆಕಾಶಭವನ, ಕಾಪಿಗುಡ್ಡ, ಕಾವೂರು, ಮಂಗಳೂರು ಎಂಬಾತನನ್ನು ಅಕ್ಟೋಬರ್ 21, 2025ರಂದು ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಅವರ ನೇತೃತ್ವದಲ್ಲಿ ಬಂಧಿಸಲಾಗಿದೆ.

ಆತನಿಂದ ಬಳಸುತ್ತಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆ ತಿಳಿಸಿರುವಂತೆ, ಈ ಪ್ರಕರಣವು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿ ತನಿಖೆ ಮುಂದುವರಿಯುತ್ತಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಇತರರ ಮೇಲೆಯೂ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.


Spread the love
Subscribe
Notify of

0 Comments
Inline Feedbacks
View all comments