ಸಿ ಆರ್ ಪಿ ಎಫ್ ಯೋಧ ಸಚಿನ್ ಬಂಧನ ಪ್ರಕರಣ: ಸದಲಗಾ ಸಬ್ ಇನ್ಸ್ ಪೆಕ್ಟರ್ ಅಮಾನತು
ಬೆಳಗಾವಿ: ಸಿ ಆರ್ ಪಿ ಎಫ್ ಯೋಧ ಸಚಿನ್ ಸಾವಂತ್ ವಿರುದ್ಧ ಕೇಸ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಸಬ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಯೋಧನ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಿಲ್ಲ. ಇನ್ನು ತನಿಖೆ ವೇಳೆ ಕರ್ತವ್ಯ ಲೋಪ ಕಂಡು ಬಂದಿದ್ದು ಪಿಎಸ್ಐ ಅನಿಲ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಯೋಧ ಸಚಿನ್ ಸಾವಂತ್ ಅವರ ಪ್ರಾಥಮಿಕ ಹೇಳಿಕೆಯನ್ನು ಪಡೆಯಲಾಗಿದ್ದು ತನಿಖೆ ಮುಂದುವರೆಯುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪೇದೆಗಳ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಐಜಿಪಿ ತಿಳಿಸಿದ್ದಾರೆ.
ಏಪ್ರಿಲ್ 23ರಂದು ಯೋಧ ಸಚಿನ್ ಸಾವಂತ್ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ ಮಾತಿನ ಚಕಮಿಕಿ ನಡೆದು ನಂತರ ಪೊಲೀಸರು ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಯೋಧ ಸಹ ಹೊಡೆದಿದ್ದರು. ಈ ಸಂಬಂಧ ಬೆಳಗಾವಿ ಪೊಲೀಸರು ಸಚಿನ್ ರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.
ಯೋಧನ ಕೈಗೆ ಕೋಳ ತೊಡಿಸಿ ಜೈಲಿನಲ್ಲಿ ಕೂರಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನು ಪೊಲೀಸರು ಕ್ರಮದ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿತ್ತು. ಇನ್ನು ನಿನ್ನ ಅಂದರೆ ಬಂಧನವಾದ ಐದು ದಿನಗಳ ನಂತರ ಸಚಿನ್ ಅವರಿಗೆ ಜಾಮೀನು ಸಿಕ್ಕಿತ್ತು.