ಎಂಆರ್ ಪಿಎಲ್ ಭೂಸ್ವಾದೀನಕ್ಕೆ ವಿರೋಧ-ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತರ ನಿಯೋಗ

ಎಂಆರ್ ಪಿಎಲ್ ಭೂಸ್ವಾದೀನಕ್ಕೆ ವಿರೋಧ-ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತರ ನಿಯೋಗ

ಬೆಂಗಳೂರು : ಎಂ ಆರ್ ಪಿ ಎಲ್ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ 1111 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸುವ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಒತ್ತಾಯಿಸಿತು. ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಈ ನಿಯೋಗದ ನೇತೃತ್ವ ವಹಿಸಿದ್ದರು.

ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ಈ ನಿಯೋಗ ಈ ಹಿಂದಿನ ಯಡಿಯೂರಪ್ಪ ಸರಕಾರವು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ 2035 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೋಟಿಸ್ ಜಾರಿ ಮಾಡಿತ್ತು. ರೈತರ ಪ್ರತಿಭಟನೆಗೆ ಮಣಿದ ಅಂದಿನ ಸರಕಾರ ಅಷ್ಟೂ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿ ರೈತರಿಗೆ ಮರಳಿಸಿತ್ತು. ಇದು ರೈತ ಚಳುವಳಿಗೆ ಸಂದ ಅಭೂತಪೂರ್ವ ಗೆಲುವು ಎಂದು ಅಂದುಕೊಳ್ಳುತ್ತಿರುವಾಗಲೇ ನಿಮ್ಮ ಸರಕಾರ ಮತ್ತದೇ ಭೂಮಿಯನ್ನು ಎಂಆರ್ ಪಿಎಲ್ ಗಾಗಿ ನೋಟಿಫಿಕೇಷನ್ ಮಾಡಿದೆ. ಇದು ಕಾನೂನು ಬಾಹಿರ ಮತ್ತು ನಿಮ್ಮ ಜನಪರ ಹಾಗೂ ರೈತಪರ ಸಿದ್ದಾಂತಕ್ಕೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಿವರಿಸಿದರು.

ಈ ಸಂಧರ್ಭದಲ್ಲಿ ಸಿದ್ದರಾಮಯ್ಯನವರು ಹೀಗೆ ಕೈಗಾರಿಕೆಗಳನ್ನು ವಿರೋಧಿಸಿದ್ರೆ, ಉದ್ಯೋಗಕ್ಕೇನು ಮಾಡುವುದು? ಎಂದು ನಿಯೋಗವನ್ನು ಪ್ರಶ್ನಿಸಿದ್ರು. ಅದಕ್ಕೆ ಪ್ರತಿಕ್ರಿಯಿಸಿದ ವಿದ್ಯಾದಿನಕರ್ ಈಗಾಗಲೇ ಎಂ ಆರ್ ಪಿ ಎಲ್ ಬಳಿ ಹೆಚ್ಚುವರಿ ಜಮೀನು ಇದೆ. ಅಲ್ಲದೆ ಜೆಸ್ಕೊಗಾಗಿ ಕೆ ಐ ಎ ಡಿ ಬಿ ಸ್ವಾಧೀನಪಡಿಸಿಕೊಂಡ ಸುಮಾರು 800 ಎಕರೆಯಷ್ಟು ರೈತರ ಜಮೀನನ್ನು ಬಳಸದೇ ಪಾಳು ಬಿಡಲಾಗಿದೆ. ಅಲ್ಲದೆ ಎಂಎಸ್ಇಜೆಡ್ ಗೆ ರೈತರಿಂದ ಕಿತ್ತು ನೀಡಲಾಗಿರುವ ಜಮೀನಿನಲ್ಲೂ ಹೆಚ್ಚಿನ ಭಾಗ ಬಳಕೆಯಾಗದೆ ಖಾಲಿ ಬಿದ್ದಿದೆ. ಈ ಎಲ್ಲಾ ಜಮೀನುಗಳನ್ನು ಬಳಸುವಂತೆ ಹಾಗು ಎಂ ಆರ್ ಪಿಎಲ್ ಆವರಣದೊಳಗೆ ಪಾಳು ಬಿದ್ದಿರುವ ಜಮೀನನ್ನು ಸದುಪಯೋಗಪಡಿಸಿಕೊಳ್ಳುವಂತೆ ಸರಕಾರ ತಾಕೀತು ಮಾಡಲಿ. ಸುಖಾಸುಮ್ಮನೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುವುದು ಸರಿಯಲ್ಲ. ಇದೊಂದು ರೀತಿಯ ಭೂ ಮಾಫಿಯಾ ವ್ಯವಹಾರದಂತಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಎಂ ಆರ್ ಪಿ ಎಲ್ ಅಧಿಕಾರಿಗಳು ಗುಪ್ತ ಸಭೆ ನಡೆಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಭೂಸ್ವಾಧೀನದಂತಹ ಕ್ರಮಕ್ಕೆ ಮುಂದಾಗುವ ಸಂದರ್ಭದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ರೈತರು ಸಭೆಯಲ್ಲಿದ್ದರು ಎಂಬ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ ಆರ್ ಪಿ ಎಲ್ ಜೊತೆಗಿನ ಸಭೆಯನ್ನೇ ಮುಂದೂಡಿದ್ದರು. ಅಧಿಕಾರಿಗಳು ಈ ರೀತಿ ವರ್ತಿಸದಂತೆ ಸೂಚನೆ ನೀಡಬೇಕು ಎಂದು ವಿದ್ಯಾದಿನಕರ್ ಮನವಿ ಮಾಡಿದ್ರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಸರಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.

ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನಿಯೋಗದಲ್ಲಿ ರೈತರಾದ ವಿಲಿಯಂ ಡಿಸೋಜ, ಲಾರೆನ್ಸ್ ಡಿಕುನ್ಹಾ, ಭೋಜಶೆಟ್ಟಿಗಾರ್, ಧೀರಜ್, ಪೆಜತ್ತಾಯ, ಮುಂತಾದವರಿದ್ದರು. ಮುಖ್ಯಮಂತ್ರಿಗಳ ಜೊತೆ ಮಾತನಾಡಿದ ರೈತ ನಾಯಕ ವಿಲಿಯಂ ಸಿಂಗೂರಿನಲ್ಲಿ ಕಮ್ಯೂನಿಷ್ಟರು ಮಾಡಿದ ತಪ್ಪನ್ನು ದಯವಿಟ್ಟು ನೀವೂ ಮಾಡಬೇಡಿ. ನಿಮ್ಮ ಮೇಲೆ ನಮಗೆ ವಿಪರೀತ ವಿಶ್ವಾಸವಿದೆ. ಮೂರು ಬೆಳೆ ಬೆಳೆಯುವ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದರು. ಅಧಿವೇಶನ ನಡೆಯುತ್ತಿರೋದ್ರಿಂದ ಸಮಯದ ಅಭಾವ ಎದುರಿಸುತ್ತಿದ್ದು, ಇನ್ನೊಂದು ದಿನ ರೈತರ ಸಭೆ ಕರೆಯುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

Leave a Reply