ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ.

ಧರ್ಮಸ್ಥಳ: ಧರ್ಮಸ್ಥಳದಲ್ಲ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಗುರುವಾರ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಕೆನರಾ ಬ್ಯಾಂಕ್‍ನ ಆಡಳಿತ ನಿರ್ದೇಶಕ ಪಿ.ಎಸ್. ರಾವತ್ ಮಾತನಾಡಿದರು. (13ಉಜಿರೆ2)

ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯಿಂದ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳ (ರುಡ್‍ಸೆಟ್ ಸಂಸ್ಥೆಗಳ) ಸೇವೆ ಮತ್ತು ಸಾಧನೆ ಶ್ಲಾಘನೀಯವಾಗಿದೆ ಎಂದು ಕೆನರಾ ಬ್ಯಾಂಕ್‍ನ ಆಡಳಿತ ನಿರ್ದೇಶಕ ಪಿ.ಎಸ್. ರಾವತ್ ಹೇಳಿದರು.

ಧರ್ಮಸ್ಥಳದಲ್ಲ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ಗುರುವಾರ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಬ್ಯಾಂಕಿಂಗ್ ಸೇವೆ ನೀಡುವುದಕ್ಕಾಗಿ 1969ರಲ್ಲಿ ಬ್ಯಾಂಕ್‍ಗಳ ರಾಷ್ಟ್ರೀಕರಣವಾದಾಗ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಬೇಗನೆ ಸಾಲ ವಿತರಣೆ, ಜನರಲ್ಲಿ ಉಳಿತಾಯ ಪ್ರವೃತ್ತಿ ಹೆಚ್ಚಿಸಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುವುದು, ಕೃಷಿ, ಉದ್ಯಮ ಮತ್ತು ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯ ನೀಡುವುದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಾಲ ಯೋಜನೆ ರೂಪಿಸಲಾಯಿತು. ಪ್ರಾದೇಶಿಕ ಗ್ರಾಮೀನ ಬ್ಯಾಂಕ್ ಮತ್ತು ಲೀಡ್ ಬ್ಯಾಂಕ್‍ಗಳ ಮೂಲಕ ಗ್ರಾಮೀಣ ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಾಯಿತು. ಆದರೂ ಕೇವಲ ಶೇ. 40 ರಷ್ಟು ಜನರು ಮಾತ್ರ ಬ್ಯಾಂಕಿಂಗ್ ಸೌಲಭ್ಯ ಬಳಸಿಕೊಂಡರು.

ಇದೀಗ ಪ್ರ್ರಧಾನ ಮಂತ್ರಿ ಜನಧನ ಯೋಜನೆಯಲ್ಲಿ ಪ್ರತಿ ಮನೆಯವರೂ ಬ್ಯಾಂಕ್ ಖಾತೆ ತೆರೆದರೂ ಶೇ. 50 ರಷ್ಟು ಖಾತೆಗಳಲ್ಲಿ ಶೂನ್ಯ ಬಾಕಿ ಇದೆ. ಯುವಜನತೆ ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಅವರ ವಾಸ್ತವ್ಯದ ಗ್ರಾಮೀಣ ಪ್ರದೇಶದಲ್ಲಿಯೇ ಕಿರು ಉದ್ಯಮ ಪ್ರಾರಂಭಿಸಲು ಬ್ಯಾಂಕ್‍ಗಳ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಪ್ರಗತಿಯೊಂದಿಗೆ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಫಲಾನುಭವಿಗಳೂ ಆರ್ಥಿಕವಾಗಿ ಸಬಲರಾಗುತ್ತಾರೆ. ಈ ದಿಸೆಯಲ್ಲಿ ರುಡ್‍ಸೆಟ್ ಸಂಸ್ಥೆಗಳ ಸೇವೆ, ಸಾಧನೆ ಶ್ಲಾಘನೀಯವಾಗಿದೆ. ದೇಶದ 17 ರಾಜ್ಯಗಳಲ್ಲಿರುವ 27 ರುಡ್‍ಸೆಟ್ ಸಂಸ್ಥೆಗಳಲ್ಲಿ 25 ಸಂಸ್ಥೆಗಳು ‘ಎ’ ಶ್ರೇಣಿಯಲ್ಲಿರುವುದು ಉಲ್ಲೇಖನೀಯವಾಗಿದೆ. ಇವುಗಳ ಮೂಲಕ 2.7 ಲಕ್ಷ ನಿರುದ್ಯೋಗಿಗಳು ತರಬೇತಿ ಪಡೆದಿದ್ದು ಶೇ. 73 ರಷ್ಟು ಯಶಸ್ವೀ ಸ್ವ-ಉದ್ಯೋಗಗಳಾಗಿದ್ದಾರೆ ಎಂದು ಹೇಳಿ ಅಭಿನಂದಿಸಿದರು.

ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ತಮ್ಮ ಕರ್ತವ್ಯವನ್ನಷ್ಟೆ ಮಾಡಿದರೆ ಸಾಲದು. ಪ್ರಾಮಾಣಿಕವಾಗಿ, ಬದ್ಧತೆಯಿಂದ ದೂರದೃಷ್ಟಿಯೊಂದಿಗೆ ಉತ್ತಮ ಸೇವೆ ನೀಡಿ ಗ್ರಾಮೀಣ ಪ್ರದೇಶದ ಪ್ರಗತಿಗೆ ಸಾಮಜಿಕ ಬದ್ದತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ರುಡ್‍ಸೆಟ್ ಸಂಸ್ಥೆಗಳ ಸೇವೆ, ಸಾಧನೆ ಮತ್ತು ಯಶೋಗಾಥೆಯ ಸಮಗ್ರ ಮಾಹಿತಿ ಇರುವ ಪುಸ್ತಕವೊಂದನ್ನು ಪ್ರಕಟಿಸಬೇಕು ಎಂದು ಅವರು ಸಲಹೆ ನೀಡಿದರು. ನಿರ್ಧಿಷ್ಟ ಗುರಿಯೊಂದಿಗೆ ಯೋಜನೆ ರೂಪಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಲಭ್ಯ ಇರುವ ಸವಲತ್ತು, ಸೌಲಭ್ಯ ಮತ್ತು ಪ್ರಾಕೃತಿಕ ಸಂಪನ್ಮೂಲ ಬಳಸಿ ಆರ್ಥಿಕ ಪ್ರಗತಿಗೆ ಶ್ರಮಿಸಬೇಕು. ತರಬೇತಿ ಹೊಂದಿದ ಉದ್ಯಮಿಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.

ರುಡ್‍ಸೆಟ್ ಸಂಸ್ಥೆಗಳಿಂದಾಗಿ ಗ್ರಾಮೀಣ ಪ್ರದೇಶದ ಆರ್ಥಿಕ ಮಟ್ಟ ಸುಧಾರಣೆಯಾಗಿದ್ದು ಜನರಲ್ಲಿ ಆರ್ಥಿಕ ಸಾಕ್ಷರತೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಇಂದು ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದು ರೈತರು ಮೀಟರ್ ಬಡ್ಡಿಯ ಶೂಲದಿಂದ ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದು ಖೇದಕರವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಬ್ಯಾಂಕಿಂಗ್ ಸೇವಾ ಸೌಲಭ್ಯ ಪಡೆದು ಆಯಾ ಪ್ರದೇಶದ ಬೇಡಿಕೆ, ಉತ್ಪಾದನೆ ಮತ್ತು ಪ್ರಾಕೃತಿಕ ಸಂಪನ್ಮೂಲವನ್ನು ಗಮನಿಸಿ ಸೂಕ್ತವಾಗಿ ಬಳಸಿಕೊಂಡು ಯಶಸ್ವೀ ಸ್ವ-ಉದ್ಯೋಗಿಗಳಾಗಿ ಪ್ರಗತಿ ಸಾಧಿಸಬಹುದು. ಲಭ್ಯ ಇರುವ ಅವಕಾಶದ ಸದುಪಯೋಗ ಪಡೆದು ಕೌಶಲ ವೃದ್ಧಿ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸುವುದೇ ರುಡ್‍ಸೆಟ್ ಸಂಸ್ಥೆಗಳ ಗುರಿಯಾಗಿದೆ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.

ಪ್ರೊ.ಎಸ್. ಪ್ರಭಾಕರ್, ಕೆನರಾ ಬ್ಯಾಂಕ್‍ನ ಮುಖ್ಯ ಮಹಾ ಪ್ರಬಂಧಕ ಎಸ್.ಎಸ್. ಭಟ್, ರುಡ್‍ಸೆಟ್ ಸಂಸ್ಥೆಗಳ ರಾಷ್ಟ್ರೀಯ ಅಕಾಡೆಮಿ ಮುಖ್ಯ ಕಾರ್ಯ ಸಂಯೋಜಕ ಕೆ.ಎನ್. ಜನಾರ್ದನ್ ಮತ್ತು ಉಪ ಮಹಾ ಪ್ರಬಂಧಕ ಎನ್. ಮಂಜುನಾಥ ಭಟ್ ಶುಭಾಶಂಸನೆ ಮಾಡಿದರು.

ರುಡ್‍ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಟಿ. ಪಿ. ಜಗದೀಶ ಮೂರ್ತಿ ಸ್ವಾಗತಿಸಿದರು. ಗಜಿಯಾಬಾದ್ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಕೆ.ಸಿ. ಪಂತ್ ಧನ್ಯವಾದವಿತ್ತರು. ಅನಂತಪುರ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಜನಾರ್ದನ್ ಕಾರ್ಯಕ್ರಮ ನಿರ್ವಹಿಸಿದರು.

ವಿಕಿಪಿಡಿಯಾ ಬರವಣಿಗೆ ಬಗ್ಗೆ ಮಾಹಿತಿ

ವಿಕಿಪಿಡಿಯಾ ಎಲ್ಲರಿಗೂ ಎಲ್ಲಾ ಕಾಲಕ್ಕೂ ಲಭ್ಯ ಇರುವ ಸ್ವತಂತ್ರ ಹಾಗೂ ಮುಕ್ತ ವೀಶ್ವಕೋಶವಾಗಿದೆ. ಇದನ್ನು ಯಾರು ಬೇಕಾದರೂ ಸ್ವತಂತ್ರವಾಗಿ ಬಳಸಬಹುದು ಎಂದು ಪ್ರಜಾವಾಣಿ ಪತ್ರಿಕೆಯ ಅಂಕಣಕಾರ ಬೆಂಗಳೂರಿನ ಡಾ. ಯು.ಬಿ. ಪವನಜ ಹೇಳಿದರು.

ಉಜಿರೆಯಲ್ಲಿ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನಲ್ಲಿ ಗುರುವಾರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿಕಿಪಿಡಿಯಾ ಬರವಣಿಗೆ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.

ಗೂಗಲ್‍ನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಮಾಹಿತಿ ಎಲ್ಲಿ ಸಿಗುತ್ತದೆ ಎಂದು ಮಾತ್ರ ಅದು ಸೂಚಿಸುತ್ತದೆ. ಯಾವುದೇ ಪ್ರಕರಣ ಘಟಿಸಿದ ತಕ್ಷಣ ವಿಕಿಪಿಡಿಯಾದಲ್ಲಿ ಅದು ನವೀಕರಣ ಆಗುತ್ತದೆ.

2001ರಲ್ಲಿ ಅಮೇರಿಕಾದಲ್ಲಿ ಪ್ರಾರಂಭಗೊಂಡ ವಿಕಿಪಿಡಿಯಾ ಪ್ರಪಂಚನದ 290 ಭಾಷೆಗಳಲ್ಲಿ ಲಭ್ಯ ಇದೆ. 2003ರಲ್ಲಿ ಕನ್ನಡದಲ್ಲಿಯೂ ವಿಕಿಪಿಡಿಯಾ ಬರವಣಿಗೆ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಮತ್ತು ಕೌಶಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ವಿಕಿಪಿಡಿಯಾ ಬಳಕೆಯಿಂದ ನಮ್ಮ ಭಾಷೆ ಮತ್ತು ಶೈಲಿ ಸುಧಾರಣೆಯಾಗುತ್ತದೆ. ಮಾಹಿತಿ ಸಂಗ್ರಹದೊಂದಿಗೆ ಕ್ರೋಢೀಕರಣ ಮತ್ತು ಉಲ್ಲೇಖವೂ ಅಗತ್ಯ ಎಂದು ಅವರು ಹೇಳಿದರು.

ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಿ ಮಾಹಿತಿ ಸಂಗ್ರಹಿಸಬೇಕು. ಭಾಷೆ ಬಳಸಿದಾಗ ಅದು ಬೆಳೆಯುತ್ತದೆ ಹಾಗೂ ನಮ್ಮ ಸಂಸ್ಕøತಿ ಉಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಉಪಸ್ಥಿತರಿದ್ದರು.