ಮೂಡುಬಿದಿರೆ : ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆ ಜಾರಿಯಾಗಲು ‘ಆಳ್ವಾಸ್ ನುಡಿಸಿರಿ- 2015’ ಉದ್ಘಾಟಿಸಿ ಡಾ.ವೀಣಾ ಶಾಂತೇಶ್ವರ

ಮೂಡುಬಿದಿರೆ : ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಕಾನೂನನ್ನು ಕಠಿಣಗೊಳಿಸಿ ಕ್ಷಿಪ್ರವಾಗಿ ಶಿಕ್ಷೆ ಜಾರಿಯಾಗುವಂತೆ ಮಾಡಬೇಕಾಗಿದೆ ಎಂದು ಖ್ಯಾತ ಲೇಖಕಿ ಡಾ.ವೀಣಾ ಶಾಂತೇಶ್ವರ ಆಗ್ರಹಿಸಿದ್ದಾರೆ.

nudisiri-2015 (14) nudisiri-2015 (15) nudisiri-2015 (16) nudisiri-2015 (9) nudisiri-2015 (10) nudisiri-2015 (12) nudisiri-2015 (6) nudisiri-2015 (2) nudisiri-2015 (3) nudisiri-2015 (7) nudisiri-2015 (8) nudisiri-2015 (5) nudisiri-2015 (17) nudisiri-2015 (18) nudisiri-2015 (19) nudisiri-2015 (20) nudisiri-2015 (21) nudisiri-2015 (22) nudisiri-2015 (23) nudisiri-2015 (24) nudisiri-2015 (25) nudisiri-2015 (26)

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಆಳ್ವಾಸ್ ನುಡಿಸಿರಿ- 2015’ನ್ನು ಗುರುವಾರ ಸಂಜೆ ಸಾಂಪ್ರದಾಯಿಕವಾಗಿ ತೆನೆಗೆ ಹೂ ಹಾಗೂ ಹಾಲೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅತ್ಯಾಚಾರ, ಅಪರಾಧ ಎಸಗಿದವರು ಪ್ರಭಾವಿ ರಾಜಕಾರಣಿಯಾಗಿರಲಿ, ಅಧಿಕಾರಿಯಾಗಿರಲಿ ಅಥವಾ ಸ್ವಾಮೀಜಿಯೇ ಆಗಿರಲಿ ಅಪರಾಧ ಸಾಬೀತಾದ ತಕ್ಷಣ ಕಠಿಣ ಶಿಕ್ಷೆ ಜಾರಿಯಾಗಬೇಕು ಎಂದು ಡಾ.ವೀಣಾ ಒತ್ತಾಯಿಸಿದರು. ಸಾಹಿತ್ಯದಿಂದ ಸಮಾಜ ಸುಧಾರಣೆ ಸಾಧ್ಯ ಎಂಬ ನಂಬಿಕೆಯೇ ಅರ್ಥ ಕಳೆದುಕೊಳ್ಳುತ್ತಿದೆ. ಆದರೆ ಇದಕ್ಕೆ ಭ್ರಮನಿರಸನ ಪರಿಹಾರವಲ್ಲ ಎಂದು ಅವರು ಹೇಳಿದರು.
ಶಿಕ್ಷಣ ಪದ್ಧತಿಯಲ್ಲಿ ವೌಲ್ಯಗಳ ಅರಿವು ಮೂಡಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಗೆ ತಕ್ಕ ಹಾಗೆ ಹೆಣ್ಣು ಮಕ್ಕಳನ್ನು ಗೌರವಿಸುವ, ವ್ಯಕ್ತಿ ಸ್ವಾತಂತ್ರವನ್ನು ಮನ್ನಿಸುವ ಮನೋಭಾವವನ್ನು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಮಕ್ಕಳಲ್ಲಿ ಬೆಳೆಸಬೇಕು. ಪರಂಪರಾಗತ ವೌಲ್ಯಗಳ ಬಗ್ಗೆ ಜಾಗೃತಿ ಮೂಡಿದಾಗ ಅತ್ಯಾಚಾರದಂತಹ ದೌರ್ಜನ್ಯಗಳನ್ನು ಹತ್ತಿಕ್ಕಲು ಸಾಧ್ಯ ಎಂದ ಅವರು, ನಮಗೆ ಏಕರೂಪದ ನಾಗರಿಕ ಸಂಹಿತೆಯೂ ಅವಶ್ಯವಾಗಿ ಬೇಕು ಎಂದು ಅಭಿಪ್ರಾಯಪಟ್ಟರು.
ಇವತ್ತು ವ್ಯಕ್ತಿ ಸ್ವಾತಂತ್ರಕ್ಕೆ ಸಾಂಪ್ರದಾಯಿಕತೆ ಸವಾಲು ಹಾಕುತ್ತಿದೆ. ದೇಶಾದ್ಯಂತ ಅಸಹಿಷ್ಣುತೆ ವ್ಯಾಪಿಸುತ್ತಿದೆ. ಭಾರತ ಸಹಿಷ್ಣುತೆಗೆ ಹಿಂದಿನಿಂದಲೂ ಹೆಸರಾಗಿದೆ. ದೇಶ ಅರ್ಥಿಕವಾಗಿ ಮುನ್ನಡೆ ಸಾಧಿಸಬೇಕಾದರೆ ಸಹಿಷ್ಣುತೆ ಅಗತ್ಯ ಎಂದ ಅವರು, ಅಸಹಿಷ್ಣುತೆ ಕೇವಲ ಭಾರತದ ಸಮಸ್ಯೆಯಲ್ಲ, ಜಾಗತಿಕ ಸಮಸ್ಯೆ. ಅಸಹಿಷ್ಣುತೆ, ಭಯೋತ್ಪಾದನೆಯನ್ನು ದಿಟ್ಟತನದಿಂದ ಎದುರಿಸಿ ಮಾನ ವೀಯ ವೌಲ್ಯಗಳನ್ನು ಪುನರ್ ಸ್ಥಾಪಿಸಲು ಇಡೀ ಜಗತ್ತೇ ಒಂದಾಗುವ ಅಗತ್ಯವಿದೆ. ನುಡಿಸಿರಿಯಂತಹ ಕಾರ್ಯಕ್ರಮಗಳು ನಮ್ಮಲ್ಲಿ ಸೌಹಾರ್ದ ಭಾವವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಪ್ರಯತ್ನಗಳು ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನುಡಿಸಿರಿಯ ರೂವಾರಿ ಡಾ.ಎಂ.ಮೋಹನ್ ಆಳ್ವ, ಹೊಸತನದ ಹುಡುಕಾಟ ಇಂದಿನ ಅಗತ್ಯ. ಇದೇ ಪರಿಕಲ್ಪನೆಯೊಂದಿಗೆ ಪ್ರತಿವರ್ಷ ಹೊಸತನದೊಂದಿಗೆ ನುಡಿಸಿರಿಯನ್ನು ಆಯೋಜಿಸಲಾಗುತ್ತಿದೆ. ಪ್ರೇಕ್ಷಕರು ಸಾಹಿತ್ಯಾಭಿಮಾನಿಗಳಿಗೆ ಇಷ್ಟವಾಗುವ ಕಾರಣಕ್ಕಾಗಿ ಪ್ರತಿವರ್ಷ ಬದಲಾವಣೆಯೊಂದಿಗೆ ನುಡಿಸಿರಿ ನಡೆಯುತ್ತಿದ್ದು, ಇದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಇದರಿಂದಾಗಿ 100 ವರ್ಷಗಳ ಕಾಲ ನುಡಿಸಿರಿಯನ್ನು ಮುಂದುವರಿಸುವ ಉತ್ಸಾಹ ಬಂದಿದೆ ಎಂದು ನುಡಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ನುಡಿಸಿರಿ ಹಿಂದಿನ ಸಭಾಧ್ಯಕ್ಷ ಡಾ.ವಿವೇಕ ರೈ, ಡಾ.ಹಂಪನಾ, ಡಾ.ಕಮಲಾ ಹಂಪನಾ, ಮಿಜಾರುಗುತ್ತು ಆನಂದ ಆಳ್ವ, ವಿವೇಕ ಆಳ್ವ, ಧರ್ಮಸ್ಥಳ ಕ್ಷೇತ್ರದ ಹರ್ಷೇಂದ್ರಕುಮಾರ್, ಮೂಡುಬಿದಿರೆ ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ, ಶ್ರೀಪತಿ ಭಟ್, ಎಸ್.ಪ್ರಭಾಕರ್ ಮಾದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ‘ವಾಙ್ಮಯ’ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಗಮನಸೆಳೆದ ಕಲಾತಂಡಗಳು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿವೇಕಾನಂದ ನಗರ ಪುತ್ತಿಗೆಯಲ್ಲಿ ನಡೆದ 12ನೆ ವರ್ಷದ ಕನ್ನಡ ನಾಡು-ನುಡಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ಯ ಉದ್ಘಾಟನೆಗೆ ಮುಂಚಿತವಾಗಿ 52 ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ವೈಭವದ ಮೆರವಣಿಗೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳ ಆಚಾರ, ವಿಚಾರ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ 800ಕ್ಕೂ ಹೆಚ್ಚಿನ ಕಲಾವಿದರನ್ನೊಳಗೊಂಡ ಕಲಾ ತಂಡಗಳೊಂದಿಗೆ ಸಾಂಸ್ಕೃತಿಕ ಮೆರವಣಿಗೆಯು ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಎಡಭಾಗದಿಂದ ಸಂಜೆ 5:30ಕ್ಕೆ ಹೊರಟಿತು. ಆಕರ್ಷಕ ಸಿಡಿಮದ್ದುಗಳು ಸಿಡಿಯುತ್ತಿದ್ದಂತೆ ಒಂದೊಂದೆ ಕಲಾತಂಡಗಳು ಪ್ರದರ್ಶನ ನೀಡುತ್ತಾ ಮುಂದೆ ಸಾಗಿದವು. ಕೆಎಸ್‌ಆರ್‌ಪಿ ತಂಡದ ಬ್ಯಾಂಡ್ ಸೆಟ್, ನಂದಿ ಧ್ವಜ, ತಟ್ಟಿರಾಯ ಕುಣಿತಗಳು, ಶಂಖಗಳ ನಾದ, ಕೊಂಬಿನ ಧ್ವನಿ, ಕುಂದಾಪುರದ ದೋಲಿನ ಸದ್ದು, ಚೆಂಡೆ ವಾದನದ ಸೊಗಸು, ಕಲ್ಲಡ್ಕದ ಗೊಂಬೆ ಕುಣಿತ, ತುಳುನಾಡಿನ ಆಟಿಕಳಂಜ, ಕರಾವಳಿಯ ಗಂಡುಕಲೆ ಯಕ್ಷಗಾನ ವೇಷದೊಂದಿಗೆ ಆಳ್ವಾಸ್ ವಿದ್ಯಾರ್ಥಿ ತಂಡ, ಮಂಗಳೂರಿನ ಪೂಜಾ ಕುಣಿತ, ಚಿತ್ರದುರ್ಗದ ಬ್ಯಾಂಡ್, ವೀರಭದ್ರ ಕುಣಿತ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದವು.
ತುಳುನಾಡಿನ ಕೊರಗರ ಡೋಲು ಕುಣಿತ, ವಾದ್ಯಗಳು, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್ ತಂಡ, ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿಯವ ತ್ರಿವರ್ಣ ಉಡುಪಿನೊಂದಿಗೆ ವಿದ್ಯಾರ್ಥಿಗಳ ತಂಡ, ಚೆಂಡೆ, ಪಂಚವಾದ್ಯ, ಬೆಳಗಾವಿ ಪೇಟ ಧರಿಸಿದ ಗಣ್ಯರು ಮೆರವಣಿಗೆಯಲ್ಲಿ ಸಾಗಿ ಬಂದದ್ದು ಗಮನ ಸೆಳೆಯಿತು.
ಮೆರವಣಿಗೆಯ ಕೊನೆಯಲ್ಲಿ ಕಲಶ ಹಿಡಿದ ವಿದ್ಯಾರ್ಥಿಗಳು ಸಮ್ಮೇಳನದ ಅಧ್ಯಕ್ಷ ಡಾ.ಟಿ.ವಿ ವೆಂಕಟಾಚಲ ಶಾಸ್ತ್ರಿ, ಉದ್ಘಾಟಕರಾದ ಡಾ.ವೀಣಾ ಶಾಂತೇಶ್ವರ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ ಹಾಗೂ ಅತಿಥಿ ಗಣ್ಯರನ್ನು ಸ್ವಾಗತಿಸಿ ಮುಂದೆ ನಡೆದರು. ಮೆರವಣಿಗೆ ವಿವೇಕಾನಂದ ನಗರದ ಬೃಹತ್ ಸಭಾಂಗಣಕ್ಕೆ ಸುತ್ತು ಬಂದು ವೇದಿಕೆಯ ಮುಂಬದಿಯಿಂದ ಸಾಗಿ ಸಂಜೆ 6 ಗಂಟೆಗೆ ಸಂಪನ್ನಗೊಂಡಿತ್ತು.

Leave a Reply