ಅಧಿಕಾರದಲ್ಲಿದ್ದಾಗ ಬಿಜೆಪಿಗರು ಕಾಮಗಾರಿ ಉದ್ಘಾಟಿಸಿದರೆ ಇಲ್ಲದಾಗ ಕಲ್ಲು ಹೊಡೆಯುತ್ತಾರೆ – ಸುಧೀರ್ ಕುಮಾರ್

Spread the love

ಅಧಿಕಾರದಲ್ಲಿದ್ದಾಗ ಬಿಜೆಪಿಗರು ಕಾಮಗಾರಿ ಉದ್ಘಾಟಿಸಿದರೆ ಇಲ್ಲದಾಗ ಕಲ್ಲು ಹೊಡೆಯುತ್ತಾರೆ – ಸುಧೀರ್ ಕುಮಾರ್

ಉಡುಪಿ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳನ್ನು ಬಿಜೆಪಿಯವರು ಉದ್ಘಾಟನೆ ಮಾಡುತ್ತಾರೆ. ಅದೇ ಬಿಜೆಪಿಯವರು ಅಧಿಕಾರದಲ್ಲಿ ಇಲ್ಲದ ಸಮಯದಲ್ಲಿ ಕಲ್ಲು ಹೊಡೆಯತ್ತಾರೆ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಅವರು ಸೋಮವಾರ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾಪು ಉತ್ತರ ವಲಯ ಸಮಿತಿ ವತಿಯಿಂದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಹಿರಿಯಡ್ಕದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಹಣಕಾಸು ಮಂತ್ರಿ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟಿನಲ್ಲಿ ದೇಶದ ಸಾಮಾನ್ಯ ಜನರಿಗೆ ಏನು ಉಪಯೋಗ ಇದೆ ಎನ್ನುವುದಕ್ಕಿಂತ ಹೆಚ್ಚು ಅವರು ರೇಷ್ಮೆ ಸೀರೆಯಲ್ಲಿ ಬಜೆಟ್ ಪ್ರತಿಯನ್ನು ತಂದಿರುವುದೇ ಇಂದು ಹೆಚ್ಚು ಚರ್ಚೆಯಾಗುತ್ತಿರುವುದು ದೇಶದ ದುರಂತವಾಗಿದೆ. ದೇಶದ ರಾಷ್ಟ್ರ ನಾಯಕರು ದೇಶದ ಜನರನ್ನು ಕಾರುಣ್ಯ ಪೂರಿತರಾಗಿ ನೋಡುತ್ತಿದ್ದರೆ ಈಗಿನ ಗೃಹ ಸಚಿವ ಅಮಿತ್ ಶಾ ಅವರ ಮುಖದಲ್ಲಿ ಒಂದು ದಿನವೂ ಕೂಡ ಸಿಟ್ಟು ಇಲ್ಲದ ದಿನವೇ ಇಲ್ಲ. ಅವರಲ್ಲಿ ಗಾಂಧಿಜಿಯ ಮಮತೆಯ ಕಣ್ಣಾಗಲಿ, ನೆಹರು ಅವರ ಬಹುತ್ವದ ಕನಸಾಗಲಿ ಅವರ ಮುಖದಲ್ಲಿ ಕಾಣುವುದಿಲ್ಲ. ಅದಕ್ಕಾಗಿಯೋ ಏನೋ ಯಡ್ಯೂರಪ್ಪ ಅವರು ಅಮಿತ್ ಶಾ ಅವರ ಮುಂದೆ ಹೋಗಲು ಕೂಡ ಹೆದರುತ್ತಾರೆ. ನಮ್ಮ ವಿರೋಧ ಬಿಜೆಪಿಯ ಸಿದ್ದಾಂತ ಮತ್ತು ಮೋದಿಯವರ ಆಡಳಿತಕ್ಕೆ. ಜಿಲ್ಲೆಯಿಂದ ಆಯ್ಕೆಯಾದ ಶೋಭಾ ಕರಂದ್ಲಾಜೆ ಜನರಿಗೆ ಸಿಗದೆ ನಾಪತ್ತೆಯಾಗಿದ್ದಾರೆ. ಅವರು ಬರುವುದು ಕೇವಲ ಅಲ್ಲಿ ಯಾರಾದರೂ ಕಾಂಗ್ರೆಸ್ ಶಾಸಕರಿದ್ದು ಯಾರದ್ದಾದ್ದರೂ ಹೆಣ ಬಿದ್ದಾಗ ಮಾತ್ರ ಅವರಿಗೆ ತನ್ನ ಕ್ಷೇತ್ರ ನೆನಪಾಗುತ್ತದೆ. ಮಂಗಳೂರಿನ ಜನತೆ ಮೋದಿ ಮುಖ ನೋಡಿ ನಳಿನ್ ಕುಮಾರ್ ಅವರಿಗೆ ಮತ ನೀಡಿದ್ದರ ಪರಿಣಾಮ ತೊಕ್ಕಟ್ಟು ಜಂಕ್ಷನ್ ಮತ್ತು ಪಂಪ್ ವೆಲ್ ಕಾಮಗಾರಿ ಇನ್ನೂ ಮುಗಿಯದೆ ಉಳಿದಿದೆ ಎಂದರು.

ಕರಾವಳಿಯ ಲಾಭದ ಬ್ಯಾಂಕುಗಳನ್ನು ಒಂದು ವೇಳೆ ಕಾಂಗ್ರೆಸ್ ಆಡಳಿತದಲ್ಲಿ ವಿಲೀನ ಮಾಡಿದ್ದೇ ಆದರೆ ಇದೇ ಬಿಜೆಪಿಗರು ಜನರ ಕೈಗೆ ಕತ್ತಿಯನ್ನು ನೀಡಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡಲು ಹಿಂಜರಿಯುತ್ತಿಲ್ಲ ಆದರೆ ಇಂದು ಅವರೇ ಲಾಭದಲ್ಲಿರುವ ವಿಜಯ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕನ್ನು ವಿಲೀನ ಮಾಡಿದ್ದು ಜನರು ಅದನ್ನು ಗಮನಿಸಬೇಕಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಅವಳಿ ಜಿಲ್ಲೆಗಳಲ್ಲಿ ನೂರಾರು ದೇವಸ್ಥಾನಗಳ ಜಿರ್ಣೋದ್ದಾರ ನಡೆಸಿದ್ದರೆ ಅದೇ ಬಿಜೆಪಿಗರು ಜಿರ್ಣೋದ್ಧಾರ ಮಾಡಿದ ದೇವಸ್ಥಾನಗಳಿಗೆ ಅಂಗಡಿಗೆ ಹೋಗಿ ಕೇಸರಿ ಬಟ್ಟೆಯನ್ನು ತಂದು ದೇವಸ್ಥಾನದ ಮೇಲೆ ಧ್ವಜವನ್ನು ಕಟ್ಟಿ ಜಾತಿ ರಾಜಕೀಯ ಮಾಡಿದ್ದು ಬಿಟ್ಟರೆ ಬೇರೆನೂ ಇಲ್ಲ ಇದನ್ನು ಜನರು ಅರ್ಥ ಮಾಡಿಕೊಳ್ಳದೆ ಹೋದರೆ ಮುಂದೆ ದೇಶಕ್ಕೆ ಅಪಾಯ ಕಾದಿದೆ ಎಂದರು.

ಕೇಂದ್ರ ಸರಕಾರದ ಸ್ವಾಯತ್ತ ಸಂಸ್ಥೆಗಳಾದ ಐಟಿ ಹಾಗೂ ಈಡಿಯನ್ನು ತನ್ನ ಕೈಗೊಂಬೆಯಾಗಿಸಿಕೊಂಡು ಡಿಕೆಶಿ, ಚಿದಂಬರಂ ಸೇರಿದಂತೆ ವಿಪಕ್ಷದ ನಾಯಕರನ್ನು ಬಂಧಿಸುತ್ತಿರುವ ಮೋದಿ ಒರ್ವ ಸರ್ಟಿಪೀಕೆಟ್ ಲೆಸ್ ರಾಜಕಾರಣಿ. ಇಂದಿಗೂ ಕೂಡ ಅವರ ವಿದ್ಯಾಭ್ಯಾಸ ಏನು ಎನ್ನುವುದು ಯಾರಿಗೂ ಕೂಡ ಗೊತ್ತಿಲ್ಲ ಇದು ನಮ್ಮ ದೇಶದ ದುರಂತ ಎಂದರು. ಒಂದೇ ಮತ, ಒಂದೇ ಭಾಷೆ ಎಂಬ ಕಲ್ಪನೆಯು ಆಘಾತಕಾರಿಯಾದ ನಿರ್ಧಾರ. ಯಾರೊಂದಿಗೂ ಚರ್ಚಿಸದೇ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ದಕ್ಷಿಣ ಭಾರತದಲ್ಲಿ ಹತ್ತಾರು ಭಾಷೆಗಳಿವೆ. ಈ ಭಾಷೆಗಳನ್ನು ಅವಲಂಬಿತರಾಗಿರುವ ಕೋಟ್ಯಂತರ ಜನರಿದ್ದಾರೆ. ಹಿಂದಿ ಹೇರಿಕೆಯ ಮೂಲಕ ದಕ್ಷಿಣ ಭಾರತ ರಾಜ್ಯಗಳ ಭಾಷಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಕೇಂದ್ರ ಸರ್ಕಾರ ನಡೆಸುತ್ತಿದೆ’ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ರಾಜ್ಯದಲ್ಲಿ ಭೀಕರ ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವವರ ಜನಸಾಮಾನ್ಯರ ಕಷ್ಟಕ್ಕೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ. ಇಲ್ಲಿಯವರೆಗೆ ಒಂದು ಬಿಡಿಗಾಸು ಪರಿಹಾರ ಘೋಷಿಸದೆ ನೆರೆ ಸಂತ್ರಸ್ತರನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕೇಂದ್ರ ಸರಕಾರದ ಸ್ವಾಯತ್ತ ಸಂಸ್ಥೆಗಳಾದ ಐಟಿ ಹಾಗೂ ಈಡಿಯನ್ನು ತನ್ನ ಕೈಗೊಂಬೆಯಾಗಿಸಿಕೊಂಡು ಡಿಕೆಶಿ, ಚಿದಂಬರಂ ಸೇರಿದಂತೆ ವಿಪಕ್ಷದ ನಾಯಕರನ್ನು ಬಂಧಿಸುತ್ತಿದೆ. ಜಿಲ್ಲೆಯಲ್ಲಿ ಆಯ್ಕೆಯಾದ ಶಾಸಕರು ಮರಳುಗಾರಿಕೆ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂಧಿರುವ ಕರಾವಳಿಯ ಸಂಸದರು ಹಾಗೂ ಶಾಸಕರು ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ‘ಮರಳುಗಾರಿಕೆಯ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕರಾವಳಿಯ ಸಂಸದರು ಮತ್ತು ಶಾಸಕರು ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಂಡು-ಕೇಳರಿಯದಂತಹ ಭೀಕರ ಮಳೆಯಿಂದಾದ ಪ್ರವಾಹಕ್ಕೆ ತುತ್ತಾಗಿ ನಿರ್ವಸಿತರಾಗಿರುವ ಜನರ ಸಂಕಷ್ಟಕ್ಕೆ ಸ್ಪಂದಿಸದಿರುವ ಮತ್ತು ಈವರೆಗೆ ಒಂದು ಬಿಡಿಗಾಸು ಪರಿಹಾರವನ್ನ ಘೋಷಿಸದೇ ಭಂಡತನ ಪ್ರದರ್ಶಿಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ. ಜೆ.ಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋದಧಿಸುತ್ತಿದ್ದೇವೆ. ಜನ ಸಾಮಾನ್ಯರ ಮೇಲೆ ಹೊರೆಯಾಗುವಂತಹ ನೂತನ ವಾಹನ ಕಾಯ್ದೆಯನ್ನು ಜಾರಿಗೊಳಿಸಿ ಭಾರಿ ದಂಡ ವಸೂಲಿ ಮಾಡುತ್ತಿರುವ ಸರ್ಕಾರದ ಜನವಿರೋಧಿ ಧೋರಣೆ ಖಂಡನೀಯವಾಗಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕರ್, ಮಾಜಿ ಶಾಸಕ ಯು ಆರ್ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಪು ಬ್ಲಾಕ್ ಉತ್ತರ ವಲಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಕಾಂಗ್ರೆಸ್ ನಾಯಕರಾದ ರೋಶನಿ ಒಲಿವೇರಾ, ಸರಳಾ ಕಾಂಚನ್, ಡಾ ಸುನೀತಾ ಶೆಟ್ಟಿ, ರಮೇಶ್ ಕಾಂಚನ್, ಯತೀಶ್ ಕರ್ಕೇರಾ ಹಾಗೂ ಇತರರು ಉಪಸ್ಥಿತರಿದ್ದರು


Spread the love