ಅಪೂರ್ಣ ರಾಷ್ಟ್ರೀಯ ಹೆದ್ದಾರಿ ಮತ್ತು ಫ್ಲೈ ಓವರ್ ವಿಳಂಬ ಕಾಮಗಾರಿಯ ವಿರುದ್ದ ಪ್ರತಿಭಟಿಸಿದ ಕುಂದಾಪುರ ನಾಗರಿಕರು

ಅಪೂರ್ಣ ರಾಷ್ಟ್ರೀಯ ಹೆದ್ದಾರಿ ಮತ್ತು ಫ್ಲೈ ಓವರ್ ವಿಳಂಬ ಕಾಮಗಾರಿಯ ವಿರುದ್ದ ಪ್ರತಿಭಟಿಸಿದ ಕುಂದಾಪುರ ನಾಗರಿಕರು

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಯ ಬಗ್ಗೆ ಸ್ಥಳೀಯ ಲೋಕಸಭಾ ಸದಸ್ಯರು, ಶಾಸಕರು ಹೋರಾಟ ಸಮಿತಿಯವರು ಜತೆಯಾಗಿ ದೆಹಲಿಗೆ ತೆರಳಿ ಕೇಂದ್ರ ರಸ್ತೆ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿದರೆ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ. ಒಂದು ವೇಳೆ ಶಾಸಕರು, ಸಂಸದರು ಹೋಗುವಾಗ ನನ್ನನ್ನು ಕರೆದರೆ ನಾನೂ ಹೋಗುತ್ತೇನೆ. ಅವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನದಲ್ಲಿ ನಾನು ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಭರವಸೆ ವ್ಯಕ್ತಪಡಿಸಿದರು.

ಅವರು ಮಂಗಳವಾರ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಆಮೆಗತಿಯಲ್ಲಿ ನಿರ್ಮಾಣವಾಗುತ್ತಿರುವ ಫ್ಲೈಓವರ್ನ ವಿಳಂಬ ಕಾಮಗಾರಿಯನ್ನು ವಿರೋಧಿಸಿ, ನಿಗದಿತ ಅವಧಿಯೊಳಗೆ ಫ್ಲೈಓವರ್ ಹಾಗೂ ರಸ್ತೆ ಕಾಮಗಾರಿಯನ್ನು ಮುಗಿಸಲು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ನೇತ್ರತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

2016ರಲ್ಲಿ ಬದಲಾದ ಪ್ರಸ್ತಾವಿತ ಯೋಜನೆಗೆ 22.24 ಕೋಟಿ ರೂ. ವೆಚ್ಚದಲ್ಲಿ ಮಂಜೂರಾತಿ ದೊರಕಿತ್ತು. ಇದೀಗ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ಹಲವು ಕಾರಣಗಳಿವೆ. ಇದರ ನಿವಾರಣೆಗೆ ದೆಹಲಿಯಲ್ಲಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ನಾನು ಹಿಂದೆ ಸಂಸದನಾಗಿದ್ದ ಅವಧಿಯಲ್ಲಿ ನಡೆಸಿದ ಅಡಿಕೆ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸಬೇಕಾಗಿದೆ ಎಂದರು.

ಶಾಸ್ತ್ರೀವೃತ್ತದ ಫ್ಲೈಓವರ್ ಅನ್ನು ಯಾರು, ಯಾರ ಅವಧಿಯಲ್ಲಿ ಮಾಡಿದ್ದು, ಇದರ ಅಗತ್ಯವಿತ್ತಾ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜಯಪ್ರಕಾಶ್ ಹಗ್ಡೆ, ರಾಷ್ಟ್ರೀಯ ಹೆದ್ದಾರಿ ಚತುಷ್ಫತ ವಿಸ್ತರಣೆಯ ಮೂಲ ಯೋಜನೆಯಲ್ಲಿ ಕುಂದಾಪುರದ ಶಾಸ್ತ್ರಿವೃತ್ತದ ಬಳಿಯಲ್ಲಿ ರಸ್ತೆಗೆ ಎಂಬ್ಯಾಕ್ಮೆಂಟ್ ನಿರ್ಮಾಣ ಮಾಡಿ ಸಣ್ಣ ಪ್ರಮಾಣದ ಅಂಡರ್ಪಾಸ್ ನಿರ್ಮಾಣ ಮಾಡುವ ಉದ್ದೇಶ ಇತ್ತು. ಆದರೆ ಅಂದು ಎಂಬ್ಯಾಕ್ಮೆಂಟ್ ನಿರ್ಮಿಸಿ ಕುಂದಾಪುರವನ್ನು ಇಬ್ಬಾಗ ಮಾಡುವುದು ಬೇಡ ಎಂಬ ಸ್ಥಳೀಯರ ಒತ್ತಾಯದಂತೆ ನನ್ನ ಅವಧಿಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಫ್ಲೈ ಓವರ್ ನಿರ್ಮಾಣದ ಪ್ರಾಸ್ತಾವನೆಗೆ ಒಪ್ಪಿಗೆ ಪಡೆಯಲಾಯಿತು ಎಂದರು.

ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ರಾ.ಹೆದ್ದಾರಿ ಅವೈಜಾನಿಕ ಕಾಮಗಾರಿಗಳ ಬಗ್ಗೆ ವಿವರಿಸಿದರು. ಯೋಜನಾ ವೆಚ್ಚ ತಯಾರಿಸದೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ನಿಗದಿ ಮಾಡಿದ ಹಣಕ್ಕಿಂತ ಹೆಚ್ಚು ಹಣಗಳು ಯೋಜನೆಗೆ ಬಳಕೆಯಾದರೂ, ಪ್ರಶ್ನಿಸುವವರು ಇಲ್ಲ. ಜಿಲ್ಲೆಯಲ್ಲಿ ನಡೆಯುವ ಯಾವುದೆ ಸಭೆಗಳಿಗೂ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳನ್ನು ಕರೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದವರು ತೆಗೆದುಕೊಂಡಿರುವ ನಿರ್ಧಾರಗಳು ಅವರು ವರ್ಗಾವಣೆಯಾಗುತ್ತಿದ್ದಂತೆ ಬದಲಾಗುತ್ತದೆ. ಕೇವಲ 10.5 ಕಿ.ಮೀ ದೂರದಲ್ಲಿ 2 ಟೋಲ್ಗೇಟ್ ನಿರ್ಮಾಣವಾಗಿದ್ದರೂ, ನಮ್ಮ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟ ಸಮಿತಿಯ ಪ್ರಮುಖರಾದ ಕಿಶೋರ ಕುಮಾರ್ ಮಾತನಾಡಿ, ನಮ್ಮ ಮುಗ್ದತೆ, ದೌರ್ಬಲ್ಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ, ಗತಿಗೆಟ್ಟ ಗುತ್ತಿಗೆ ಕಂಪೆನಿಗೆ ವರವಾಗುತ್ತಿದೆ. 2010 ರಲ್ಲಿ ಆರಂಭವಾದ ಕಾಗಾರಿ 2013ರಲ್ಲಿ ಮುಗಿಯಬೇಕಿತ್ತು. ಎಂಬ್ಯಾಕ್ಮೆಂಟ್ ಅನ್ನು ಫ್ಳೈಓವರ್ ಆಗಿ ಪರಿವರ್ತಿಸಿದ್ದರಿಂದ ಫ್ಲೈಓವರ್ ನಿಧಾನವಾಗಿ ಸಾಗುತ್ತಿದೆ ಎನ್ನುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ದಿಕ್ಕು ತಪ್ಪಿಸುತ್ತಿದ್ದಾರೆ. ಹೆದ್ದಾರಿ ವಿಸ್ತರಣೆಯ ಮೂಲ ಯೋಜನೆಯಲ್ಲಿ ಬಸ್ರೂರು ಮೂರು ಕೈ ಬಳಿ ಎಂಬ್ಯಾಕ್ಮೆಂಟ್, ಟಿ.ಟಿ ರಸ್ತೆ ಬಳಿಯಲ್ಲಿ ಅಂಡರ್ಪಾಸ್ ನಿರ್ಮಾಣ ಮಾಡುವ ಯೋಜನೆಗಳೇ ಇದ್ದಿರಲಿಲ್ಲ. ಗುತ್ತಿಗೆ ಕಂಪೆನಿಯ ಅನೂಕೂಲಕ್ಕಾಗಿ ಯೋಜನೆಗಳನ್ನು ಬದಲಾಯಿಸಲಾಗುತ್ತಿದೆ ಎಂದರು.

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಕೆ.ರಾಜು, ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದ ಬಳಿಕ ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆ ಕಂಪೆನಿ ಅಧಿಕಾರಿಗಳಲ್ಲಿ ಯೋಜನೆಯನ್ನು ಯಾವಾಗ ಮುಗಿಸುತ್ತೀರಿ ಎನ್ನುವ ಸ್ವಷ್ಟ ಭರವಸೆ ನೀಡುವಂತೆ ಸೂಚಿಸಿದರು. ಪ್ರತಿಸ್ಪಂದಿಸಿದ ಅಧಿಕಾರಿಗಳು 2020, ಮಾ.31 ರ ಒಳಗೆ ಮುಗಿಸುವ ಭರವಸೆ ನೀಡಿದರು.

ನಿಗದಿತ ದಿನಾಂಕದ ಒಳಗೆ ಕಾಮಗಾರಿ ಪೂರ್ಣಗೊಳ್ಳದೆ ಹೋದಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮಾ.31 ರಿಂದ ಟೋಲ್ಸಂಗ್ರಹ ಬಂದ್ ಮಾಡಲಾಗುತ್ತದೆ. ಎ.ಸಿ ಕೋರ್ಟ್ನಲ್ಲಿ 133 ಕಾನೂನು ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲಾಗುತ್ತದೆ. ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಸಂಬಂಧಿತರ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಉಪವಿಭಾಗಾಧಿಕಾರಿ ಹೇಳಿದರು.

ಅಧಿಕಾರಿಗಳು ನೀಡಿದ ಭರವಸೆಗಳಿಗೆ ತೃಪ್ತರಾಗದ ಪ್ರತಿಭಟನಾಕಾರರು ಧರಣಿ ಮುಗಿದು ಧನ್ಯವಾದ ಸಮರ್ಪಿಸುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ತಡೆ ಮಾಡಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ನವಯುಗ ಗುತ್ತಿಗೆ ಕಂಪೆನಿ ವಿರುದ್ದ ಧೀಕ್ಕಾರಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಏಕಾಏಕಿ ನಡೆದ ಬೆಳವಣಿಗೆಯಿಂದ ಒಂದು ಕ್ಷಣ ವಿಚಿಲಿತರಾದ ಪೆÇಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೂಲಿಕೆಗೆ ಮುಂದಾದರು. ಈವೇಳೆಯಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಬಿರುಸಿನ ವಾಗ್ವಾದ ನಡೆಯಿತು. ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್ ಹಾಗೂ ಎಸ್.ಐ ಹರೀಶ್ ನಾಯ್ಕ್ ಅವರ ಮನವೂಲಿಕೆಯಿಂದಾಗಿ ಬಳಿಕ ಹೆದ್ದಾರಿ ತಡೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಪ್ರಮುಖರಾದ ರಾಜೇಶ್ ಕಾವೇರಿ, ಶಶಿಧರ ಹೆಮ್ಮಾಡಿ, ನಿತ್ಯಾನಂದ ಶೆಟ್ಟಿ ಅಂಪಾರು, ಗಣೇಶ್ ಮೆಂಡನ್, ನ್ಯಾಯವಾದಿಗಳಾದ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ, ಮಲ್ಯಾಡಿ ಜಯರಾಮ್ಶೆಟ್ಟಿ, ಕೆ.ಸಿ.ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಪಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಜಿ.ಕೆ.ಗಿರೀಶ್, ಅಬ್ಬು ಮಹಮ್ಮದ್, ಪ್ರಭಾವತಿ ಶೆಟ್ಟಿ, ಸ್ಥಳೀಯರಾದ ವಿನೋದ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಶ್ರೀಧರ ಗೋಲ್ಡ್ನ್ ಮಿಲ್ಲರ್, ನವೀನ್ ಕೋತ್ ಆನಗಳ್ಳಿ, ಸುಧಾಕರ ಕಾಂಚನ್, ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ, ಆಲ್ವಿನ್ ಅಂದ್ರಾದೆ, ಪ್ರತಾಪ್ ಶೆಟ್ಟಿ, ವಿಠ್ಠಲ್ ಪೂಜಾರಿ ಸಾಸ್ತಾನ, ಪ್ರಶಾಂತ ಶೆಟ್ಟಿ ಸಾಸ್ತಾನ, ರಾಜೇಶ್ ಪಾಂಡೇಶ್ವರ, ವೆಂಕಟೇಶ್ ಕೋಣಿ, ರಿಕ್ಷಾ ಚಾಲಕರಾದ ಲಕ್ಷ್ಮಣ್ ಬರೇಕಟ್ಟು, ರಾಜು ದೇವಾಡಿಗ, ರಮೇಶ್ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

  Subscribe  
Notify of