ಅಮಾಸೆಬೈಲು: ಸೋಲಾರ್‌ ದೀಪ ಅನುಷ್ಠಾನ ಸಮಾರೋಪ

Spread the love

ಅಮಾಸೆಬೈಲು: ಸೋಲಾರ್‌ ದೀಪ ಅನುಷ್ಠಾನ ಸಮಾರೋಪ

ಉಡುಪಿ: ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸೋಲಾರ್‌ ದೀಪಗಳ ಕೊಡುಗೆ ಸಮಾರೋಪ ಇದೇ 9 ರಂದು ಬೆಳಿಗ್ಗೆ 10.30 ಕ್ಕೆ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಅಮಾಸೆಬೈಲು ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಎ.ಜಿ. ಕೊಡ್ಗಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಸೆಬೈಲು ಚಾರಿಟಬಲ್‌ ಟ್ರಸ್ಟ್‌ ಕರ್ಣಾಟಕ ಬ್ಯಾಂಕ್‌, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಮಾಸೆಬೈಲು ಗ್ರಾಮ ಪಂಚಾಯ್ತಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಹಾಗೂ ಉಡುಪಿ ಜಿಲ್ಲಾಧಿಕಾರಿ ಸಹಕಾರದೊಂದಿಗೆ 2016ರ ಮೇ ತಿಂಗಳಲ್ಲಿ ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಲಾರ್‌ ದೀಪ ಅಳವಡಿಸುವ ಯೋಜನೆ ಆರಂಭಿಸಲಾಯಿತು. ಅದರಂತೆ 2017ರ ಮಾರ್ಚ್‌ ತಿಂಗಳವರೆಗೆ ಒಟ್ಟು ಮೂರು ಹಂತಗಳಲ್ಲಿ ಒಟ್ಟು 1643 ಮನೆಗಳಿಗೆ ಸೋಲಾರ್‌ ವಿಕೇಂದ್ರೀಕೃತ ಬೆಳಕಿನ ವ್ಯವಸ್ಥೆ ಹಾಗೂ 27 ಸೋಲಾರ್‌ ದೀಪಗಳನ್ನು ಅಳವಡಿಸಲಾಗಿದೆ ಎಂದರು.

ಈ ಸೋಲಾರ್‌ ಯೋಜನೆಗೆ ಕೇಂದ್ರ ಸರ್ಕಾರದ ಎಂಎನ್‌ಆರ್‌ಇಯಿಂದ ಶೇ. 30ರಂತೆ 64,17,090, ಕೆಆರ್‌ಇಡಿಎಲ್‌ಯಿಂದ ಶೇ. 20ರಂತೆ 42,78,090, ಜಿಲ್ಲಾಧಿಕಾರಿಗಳಿಂದ 25 ಲಕ್ಷ, ಫಲಾನುಭವಿಗಳ ವಂತಿಗೆ 2 ದೀಪಕ್ಕೆ 3 ಸಾವಿರ, 4 ದೀಪಕ್ಕೆ 6 ಸಾವಿರ, ಬೀದಿ ದೀಪ 12 ಸಾವಿರದಂತೆ 77.31 ಲಕ್ಷ ಹಾಗೂ ಅಮಾಸೆಬೈಲು ಚಾರಿಟೇಬಲ್‌ ಟ್ರಸ್ಟ್‌ನಿಂದ 4,64,150 ಸಹಿತ ಒಟ್ಟು 2,13,90,300 ರೂ.ಗಳನ್ನು ವಿನಿಯೋಗಿಸಲಾಗಿದೆ. ಎಂಎನ್‌ಆರ್‌ ಯೋಜನೆಯಡಿ ನೀಡಲಾಗಿದ್ದ ಭರವಸೆಯಂತೆ ಶೇ. 30ರಷ್ಟು ಅನುದಾನ ನೀಡದೆ ಕಡಿಮೆ ನೀಡಿದ್ದರಿಂದ ಬಾಕಿ ಮೊತ್ತ 27,25,490 ರೂ.ಗಳನ್ನು ರಾಜ್ಯ ಸರ್ಕಾರ ಹಾಗೂ ಟ್ರಸ್ಟ್‌ನ ವತಿಯಿಂದ ಭರಿಸಲಾಗಿದೆ ಎಂದು ತಿಳಿಸಿದರು.

ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ 29 ದೇವಸ್ಥಾನಗಳಿಗೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಉಚಿತ ಸೋಲಾರ್‌ ದೀಪಗಳನ್ನು ನೀಡಿದ್ದಾರೆ. ಸೋಲಾರ್‌ ಅಳವಡಿಸುವ ಕುರಿತಂತೆ ಟ್ರಸ್ಟ್‌ ಹಾಗೂ ಸೆಲ್ಕೋ ಫೌಂಡೇಶನ್‌ ನಡುವೆ ಒಪ್ಪಂದ ಆಗಿದ್ದು, ಅದರಂತೆ ದೀಪಗಳ ಅಳವಡಿಕೆ, ದುರಸ್ತಿ ಕಾರ್ಯಕ್ಕೆ ಸಂಬಂಧಿಸಿ 5 ವರ್ಷಗಳ ಕಾಲ ಸಂಸ್ಥೆಯು ಕಡ್ಡಾಯ ಸೇವೆಯನ್ನು ನೀಡಲಿದೆ ಎಂದು ಅವರು ಮಾಹಿತಿ ನೀಡಿದರು.

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸುವರು. ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಭಟ್‌ ಅಧ್ಯಕ್ಷತೆ ವಹಿಸುವರು. ಸೆಲ್ಕೋ ಇಂಡಿಯಾದ ಅಧ್ಯಕ್ಷ ಡಾ. ಎಚ್‌. ಹರೀಶ್‌ ಹಂದೆ ದಿಕ್ಸೂಚಿ ಭಾಷಣ ಮಾಡುವರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಉಪಸ್ಥಿತರಿರುವರು ಎಂದರು.

ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಪಿಡಿಒ ಸತೀಶ್‌ ನಾಯ್ಕ್‌, ಸೆಲ್ಕೋ ಕಂಪೆನಿಯ ಗುರುಪ್ರಕಾಶ್‌ ಇದ್ದರು


Spread the love