ಅವಧಿ ಮೀರಿದ್ದಕ್ಕೆ ಯಕ್ಷಗಾನ ಕಾರ್ಯಕ್ರಮ ಮೊಟಕು: ನೆಟ್ಟಿಗರಿಂದ ವ್ಯಾಪಕ ಆಕ್ರೋಶ

Spread the love

ಅವಧಿ ಮೀರಿದ್ದಕ್ಕೆ ಯಕ್ಷಗಾನ ಕಾರ್ಯಕ್ರಮ ಮೊಟಕು: ನೆಟ್ಟಿಗರಿಂದ ವ್ಯಾಪಕ ಆಕ್ರೋಶ

ಕುಂದಾಪುರ: ಪೊಲೀಸ್ ಇಲಾಖೆಯಿಂದ‌ ಪಡೆದುಕೊಂಡ ಅನುಮತಿಯ ಅವಧಿ‌ ಮೀರಿದೆ ಎನ್ನುವ ಕಾರಣಕ್ಕೆ ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಗಾಗಿ ನಡೆಯುತ್ತಿದ್ದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಮೊಟಕುಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕುಂದಾಪುರ ಸಮೀಪದ ಆನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕುದ್ರು ಎಂಬಲ್ಲಿನ ಯಕ್ಷಗಾನ ಕಲಾಸಕ್ತರಾದ ಮಹಾಬಲ ಪೂಜಾರಿ ಎನ್ನುವವರು ಕಳೆದ 6 ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಭಾಷೆಯ‌ ಪ್ರಾಚೀನ ಕಲೆಯಾದ ಯಕ್ಷಗಾನದ ಉಳಿವಿಗಾಗಿ ಹಾಗೂ ಹವ್ಯಾಸಿ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎನ್ನುವುದಕ್ಕಾಗಿ ಊರವರ ಹಾಗೂ ದಾನಿಗಳ ಸಹಾಯದಿಂದ 9 ದಿನಗಳ ಕಾಲ ‘ ಯಕ್ಷೋತ್ಸವ ‘ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ದಿನ ಸಂಜೆ 6 ರಿಂದ ರಾತ್ರಿ 10.30 ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಹಾಗೂ ಜಿಲ್ಲೆಯ ಹವ್ಯಾಸಿ ತಂಡಗಳು ಭಾಗವಹಿಸಿ ತಮ್ಮ ಪ್ರತಿಭಾ ಪ್ರದರ್ಶನವನ್ನು ಆನಾವರಣಗೊಳಿಸುತ್ತಾರೆ. 9 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಊರಿನ ಕಲಾಸಕ್ತರಲ್ಲದೆ. ಸಾವಿರಾರು ಮಂದಿ ಆನ್ ಲೈನ್ ನಲ್ಲಿಯೂ ವೀಕ್ಷಣೆ ಮಾಡುತ್ತಾರೆ.

ನ.3 ರ ಶುಕ್ರವಾರ ಹೇರಿಕುದ್ರು ಮಹಾಗಣಪತಿ ಮಾನಸ ಮಂದಿರದಲ್ಲಿ ಉದ್ಘಾಟನೆಗೊಂಡ ಈ ಬಾರಿಯ ಕಾರ್ಯಕ್ರಮದಲ್ಲಿ ಗುಜ್ಜಾಡಿಯ ಯಕ್ಷಮಿತ್ರ ಬಳಗ ಶಿವಭಕ್ತ ವೀರಮಣಿ ಎನ್ನುವ ಕಥಾಮೃತವನ್ನು ಪ್ರದರ್ಶಿಸಿದ್ದರು. ಶನಿವಾರ ಕುಂದಾಪುರದ ಗೆಜ್ಜೆನಾದ ಯಕ್ಷಗಾನ ಮಂಡಳಿಯವರ ಶ್ರೀ ಕೃಷ್ಣ ಲೀಲಾಮೃತ ಪ್ರಸಂಗ ಆಯೋಜನೆಯಾಗಿತ್ತು. ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಬಹುತೇಕ ಮಕ್ಕಳೇ ಇದ್ದ ಈ ತಂಡದ ಭಾಗವತಿಕೆಯೂ ಹುಡುಗನೊಬ್ಬ ಮಾಡುತ್ತಿದ್ದ. ಸಂಜೆ ಪ್ರಾರಂಭವಾಗಿದ್ದ ಯಕ್ಷಗಾನ ಪ್ರದರ್ಶನದೂದ್ದಕ್ಕೂ ಭಾಗವತಿಕೆ ಮಾಡುತ್ತಿದ್ದ ಭಾಗವತರಿಗೆ ಸುಸ್ತಾಗಿದ್ದರಿಂದ ವಿಶ್ರಾಂತಿಯ ಕಾರಣಕ್ಕಾಗಿ ಪ್ರದರ್ಶನದ ಅವಧಿಯಲ್ಲಿ 30-40 ನಿಮಿಷಗಳ ಏರು ಪೇರಾಗಿತ್ತು. ಇದರಿಂದಾಗಿ ಪ್ರದರ್ಶನಕ್ಕಾಗಿ ಪಡೆದುಕೊಂಡಿದ್ದ 10.30 ರ ಅವಧಿ ಮೀರಿತ್ತು.

ಈ ವೇಳೆಯಲ್ಲಿ ಪ್ರದರ್ಶನ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಅವಧಿ ಮೀರಿರುವ ಕುರಿತು ಸ್ಥಳೀಯರ ಆಕ್ಷೇಪ ಇರೋದರಿಂದ ಕಾರ್ಯಕ್ರಮ ಮೊಟಕುಗೊಳಿಸಲು ಸೂಚಿಸಿದ್ದರಿಂದ ಕಾರ್ಯಕ್ರಮ ಮೊಟಕುಗೊಳಿಸಲಾಗಿದೆ.

ಅಧಿಕಾರಿಗಳ‌ ಸಲಹೆಯಂತೆ ಕಾರ್ಯಕ್ರಮ ನಿಲ್ಲಿಸುವ ಹಾಗೂ ಇದಕ್ಕೆ ಕಾರಣರಾಗಿರುವವರ ಕುರಿತು ಕಾರ್ಯಕ್ರಮದ ಆಯೋಜಕರು ಹೇಳಿರುವ ಮಾತುಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ವೈಯಕ್ತಿಕ ಕಾರಣಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳದಂತೆ ನೆಟ್ಟಿಗರು ಭರಪೂರ್ತಿ ಕಾಮೆಂಟ್ ಮಾಡುತ್ತಿದ್ದಾರೆ.


Spread the love