ಅಷ್ಟ ಮಠದ ಎಲ್ಲಾ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂದ ಶೀರೂರು ಸ್ವಾಮೀಜಿ ವೀಡಿಯೋ ಸುದ್ದಿವಾಹಿನಿಯಲ್ಲಿ ವೈರಲ್ !

ಅಷ್ಟ ಮಠದ ಎಲ್ಲಾ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂದ ಶೀರೂರು ಸ್ವಾಮೀಜಿ ವೀಡಿಯೋ ಸುದ್ದಿವಾಹಿನಿಯಲ್ಲಿ ವೈರಲ್ !

ಉಡುಪಿ: ವಿಶ್ವ ವಿಖ್ಯಾತ ಕೃಷ್ಣ ಮಠದಲ್ಲಿರುವ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿವೆ ಅಲ್ಲದೆ ನನಗೂ ಮಕ್ಕಳಿದ್ದಾರೆ ಎಂದು ಹೇಳಲಾದ ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯಂದು ಎನ್ನಲಾದ ವೀಡಿಯೊವೊಂದು ಮಂಗಳವಾರ ನಾಡಿನ ಸುದ್ದಿನವಾಹಿನಿಯಲ್ಲಿ ಪ್ರಕಟವಾಗುತ್ತಿದ್ದಂತೆ ಕೃಷ್ಣ ಮಠ ಹಾಗೂ ಭಕ್ತಾದಿಗಳಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದೆ.

ಕುಟುಕು ಕಾರ್ಯಚರಣೆಯ ಮೂಲಕ ರಾಜ್ಯ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಶಿರೂರು ಸ್ವಾಮೀಜಿ ಇಂತಹ ಸ್ಪೋಟಕ ಮಾಹಿತಿಗಳನ್ನು ನೀಡಿದ್ದಾರೆ ಎನ್ನಲಾಗಿದೆ.

8 ನೇ ವಯಸ್ಸಿನಲ್ಲಿ ನಮಗೆ ಸನ್ಯಾಸ ನೀಡುತ್ತಾರೆ ಆಗ ನಮಗೆ ಬುದ್ದಿ ಇರುವುದಿಲ್ಲ, ಆದರೆ ಪ್ರಾಯಕ್ಕೆ ಬಂದ ಬಳಿಕ ನಮಗೂ ಆಶೆ ಆಕಾಂಕ್ಷೆಗಳಿರುತ್ತವೆ. ಕೃಷ್ಣ ಮಠದ ಅಷ್ಟಮಠದ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿದ್ದಾರೆ. ಮಠದಲ್ಲಿ ಸಂಬಂಧ ಇಲ್ಲದವರು ಬಂದು ಕೋಟ್ಯಾಂತರ ಹಣ ಲೂಟಿ ಮಾಡುತ್ತಿದ್ದಾರೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಎನ್ನುವುದು ಹಣ ಮಾಡುವ ಸ್ಕೀಮ್ ಬಿಟ್ಟರೆ ಬೇರೆನೂ ಇಲ್ಲ. ಆದರೆ ಪರ್ಯಾಯದ ಹೆಸರಿನಲ್ಲಿ ಹಣವನ್ನು ಲೂಟಿ ಹೊಡೆಯುತ್ತಾರೆ ಎನ್ನುವುದನ್ನು ಸ್ವಾಮೀಜಿಯವರು ವೀಡಿಯೋದಲ್ಲಿ ಹೇಳಿದ್ದಾರೆ  ಎಂದು ಖಾಸಗಿ ವಾಹಿನಿ ಹೇಳಿಕೊಂಡಿದೆ.

ಈ ರೀತಿಯ ವೀಡಿಯೋ ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಶಿರೂರಿನ ಮೂಲ ಮಠದಲ್ಲಿದ್ದ ಸ್ವಾಮೀಜಿ ಉಡುಪಿಗೆ ಧಾವಿಸಿ ಬಂದಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿ ಇದೊಂದು ಫೇಕ್ ವೀಡಿಯೊ ಆಗಿದ್ದು, ಇದನ್ನು ಡಬ್ಬಿಂಗ್ ಮಾಡಿ ಈಗ ಹರಿಯಬಿಡಲಾಗಿದೆ. ಇದು ನನ್ನ ವ್ಯಕ್ತಿತ್ವನ್ನು ಹಾಳು ಮಾಡುವ ಹುನ್ನಾರವಾಗಿದೆ. ಖಾಸಗಿ ಚಾನೆಲ್ ಪ್ರಸಾರ ಮಾಡುತ್ತಿರುವ ವೀಡಿಯೋ ಹೇಗೆ ಸಿಕ್ಕಿತು ಎನ್ನುವುದು ನನಗೆ ತಿಳಿದಿಲ್ಲ. ನಾನು ಇತ್ತೀಚೆಗೆ ರಾಜಕೀಯವನ್ನು ಪ್ರವೇಶಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ಬಳಿಕ, ನನ್ನ ರಾಜಕೀಯ ಪ್ರವೇಶವನ್ನು ಸಹಿಸಲಾರದವರು ಈ ರೀತಿ ಮಾಡಿರಬೇಕು ಎಂದು ಆರೋಪಿಸಿದ ಸ್ವಾಮೀಜಿ, ಚುನಾವಣೆ ವಿಚಾರ ಬಂದಾಗ ಮಾನಹಾನಿಗೊಳಿಸುವ ಷಡ್ಯಂತ್ರ ಸಾಮಾನ್ಯವಾಗಿರುತ್ತದೆ. ಮುಂದೆ ಇಂಥ ಇನ್ನಷ್ಟು ಅಪಪ್ರಚಾರಗಳು ನಡೆಯಬಹುದು ಆದರೆ ಇದಕ್ಕೆಲ್ಲಾ ನಾನು ಜಗ್ಗುವುದಿಲ್ಲ. ನಾನು ಚುನಾವಣೆಗೆ ನಿಲ್ಲುವುದು ನಿಶ್ಚಿತ ಇವೆಲ್ಲವಕ್ಕೂ ಕಾನೂನಿನ ಮೂಲಕವೇ ಉತ್ತರಿಸುತ್ತೆನೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಏನನ್ನೂ ಮಾಡಲು ಸಾಧ್ವವಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.