ಉಡುಪಿ ಅಷ್ಟಮಠ ಪರ್ಯಾಯ ಮಹೋತ್ಸವಕ್ಕೆ ತಡೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

Spread the love

ಉಡುಪಿ ಅಷ್ಟಮಠ ಪರ್ಯಾಯ ಮಹೋತ್ಸವಕ್ಕೆ ತಡೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಉಡುಪಿಯ ಅಷ್ಟ ಮಠಗಳ ಪರ್ಯಾಯ ಮಹೋತ್ಸವಕ್ಕೆತಡೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಈ ಬಾರಿಯ ಪರ್ಯಾಯ ಪೀಠವನ್ನು ಪುತ್ತಿಗೆ ಶ್ರೀಗಳು ನಿರ್ವಹಿಸಲಿದ್ದಾರೆ. ಅವರು ಸಮುದ್ರೋಲ್ಲಂಘನೆ ಮಾಡಿ ವಿದೇಶಕ್ಕೆ ಪ್ರಯಾಣಿಸಿ ಸಂಪ್ರದಾಯ ಉಲ್ಲಂಘಿಸಿದ ಕಾರಣ ಅವರಿಗೆ ಪರ್ಯಾಯ ನೀಡದಂತೆ ಕೋರಿ ಗುರುರಾಜ ಜೀವನರಾವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ರಿದ್ದ ಪೀಠ, ವಿದೇಶದಲ್ಲಿ ಜ್ಞಾನ ಪ್ರಸಾರ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದೆ.

ರಾಷ್ಟ್ರಕವಿ ಕುವೆಂಪು ಅವರ ಕವಿತೆ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಕವಿತೆ ಉಲ್ಲೇಖಿಸಿದ ನ್ಯಾಯಪೀಠ, ಮನೆ ಕಟ್ಟಿ ಕೂರುವುದಕ್ಕಿಂತ ಹೊರಗೆ ಓಡಾಡುವುದು ಲೇಸು. ಧಾರ್ಮಿಕ ಆಚರಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿದೆ.

2008ರಲ್ಲಿ ಕೂಡ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಷ್ಟ ಮಠಗಳ ಪೈಕಿ ಆರು ಮಠಗಳ ಮಠಾಧೀಶರು ಪರ್ಯಾಯದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಶೀರೂರು ಶ್ರೀಗಳು ಮಾತ್ರ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಬೆಂಬಲ ಸೂಚಿಸಿದ್ದರು.

ಈ ಬಾರಿ ಇದೀಗ ಮತ್ತೆ ಪರ್ಯಾಯ ಮಹೋತ್ಸವಕ್ಕೆ ಭಿನ್ನಮತದ ಅಪಸ್ವರ ಕೇಳಿಬರಲಾರಂಭಿಸಿದೆ. ಪರ್ಯಾಯ ಉತ್ಸವದಿಂದ ಇತರೆ ಮಠಾಧೀಶರು ಅಂತರ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣಕ್ಕೆ ಇತರ ಮಠಗಳ ಶ್ರೀಗಳು ಗೈರಾದರೆ 2008ರ ಇತಿಹಾಸ ಪುನರಾವರ್ತನೆಯಾಗಲಿದೆ.

ಜನವರಿ 17, 18ರಂದು ಪರ್ಯಾಯ ಮಹೋತ್ಸವ ನೆರವೇರಲಿದ್ದು, ಈ ವೇಳೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಬಹುತೇಕ ಗೈರಾಗಲಿದ್ದಾರೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣ ಪ್ರತಿಷ್ಠೆ ನಡೆಯಲಿರುವ ಕಾರಣ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯೂ ಆಗಿರುವ ಅವರು ಜನವರಿ 17ರಂದೇ ಅಯೋಧ್ಯೆಗೆ ತೆರಳಲಿದ್ದಾರೆ.


Spread the love