ಉಡುಪಿ ಜಿಲ್ಲೆಯಲ್ಲಿ 70,971 ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣ 

Spread the love

ಉಡುಪಿ ಜಿಲ್ಲೆಯಲ್ಲಿ 70,971 ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣ 

ಉಡುಪಿ: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ 2025-26ನೇ ಸಾಲಿನಲ್ಲಿ ಉಡುಪಿ ಜಿಲ್ಲಾದ್ಯಾಂತ ವಿದ್ಯುತ್ ಸಂಪರ್ಕ ಪಡೆದ ಒಟ್ಟು ಸುಮಾರು 3.55 ಲಕ್ಷ ಮನೆಗಳಿಗೂ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ಮಾಡುವ ಸಂಬಂಧ ಈಗಾಗಲೇ ಮೆಸ್ಕಾಂ ಇಲಾಖೆ ವತಿಯಿಂದ ಆರ್.ಆರ್.ನಂಬರ್ ಹೊಂದಿರುವ ಮನೆಗಳಿಗೆ ಜಿಯೋ ಟ್ಯಾಗ್ ಸ್ಟಿಕರ್ ಅಳವಡಿಸಲಾಗಿರುತ್ತದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ರ ಮನೆ ಮನೆ ಸಮೀಕ್ಷೆಯನ್ನು ಸೆ.22 ರಿಂದ ಅ.07 ರವೆರಗೆ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯ ಕೈಗೊಂಡಿದ್ದು, ಗಣತಿದಾರರು ಜಿಲ್ಲೆಯ ನಾಗರೀಕ ಮನೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕುಟುಂಬದ ಪಡಿತರ ಚೀಟಿ, ಆಧಾರ್ ಸಂಖ್ಯೆ, ವಿಶೇಷ ಚೇತನರು ಕುಟುಂಬದಲ್ಲಿದ್ದರೆ ಯು.ಡಿ.ಐ.ಡಿ ಸಂಖ್ಯೆಯನ್ನು ಗಣತಿದಾರರಿಗೆ ನೀಡಬೇಕಾಗಿರುತ್ತದೆ. ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ಗಳು ಮೊಬೈಲ್ ನಂಬರ್ಗಳಿಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ ಹಾಗೂ ಸಮೀಕ್ಷೆ ವೇಳೆ E-Kyc (Aadhar) ಪ್ರಕ್ರಿಯೆಗಾಗಿ ಒ.ಟಿ.ಪಿ. ಸಂಖ್ಯೆ ಆ ಸದಸ್ಯರ ಆಧಾರ್ ನಂಬರ್ಗೆ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ. ಒಂದು ವೇಳೆ ಆ ಸದಸ್ಯರು ಮನೆಯಲ್ಲಿಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರ ಫೋನ್ ಮೂಲಕ ಒ.ಟಿ.ಪಿ. ಸಂಖ್ಯೆಯನ್ನು ನೀಡಬೇಕು.

ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಜಿಲ್ಲೆಯ ನಾಗರೀಕರಿಗೆ ಸಿಬ್ಬಂದಿಗಳ ಮೂಲಕ ಮಾದರಿ ನಮೂನೆಯೊಂದಿಗೆ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಅದರಂತೆ, ಸಮೀಕ್ಷೆಯನ್ನು ಸೆ.22 ರಿಂದ ಪ್ರಾರಂಭಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಈ ಕೆಳಕಂಡAತೆ ಸಮೀಕ್ಷೆ ಮಾಡಲಾಗಿರುತ್ತದೆ.

ಉಡುಪಿ ತಾಲೂಕಿನಲ್ಲಿ 97,918 ಕುಟುಂಬಗಳು, 844 ಬ್ಲಾಕ್ಗಳು, 7,497 ಮನೆಗಳ ಸಮೀಕ್ಷೆ, ಕುಂದಾಪುರ ತಾಲೂಕಿನಲ್ಲಿ 65,791 ಕುಟುಂಬಗಳು, 621 ಬ್ಲಾಕ್ಗಳು, 15,341 ಮನೆಗಳ ಸಮೀಕ್ಷೆ, ಕಾರ್ಕಳ ತಾಲೂಕಿನಲ್ಲಿ 57,740 ಕುಟುಂಬಗಳು, 531 ಬ್ಲಾಕ್ಗಳು, 12,612 ಮನೆಗಳ ಸಮೀಕ್ಷೆ, ಕಾಪು ತಾಲೂಕಿನಲ್ಲಿ 43,834 ಕುಟುಂಬಗಳು, 403 ಬ್ಲಾಕ್ಗಳು, 6,519 ಮನೆಗಳ ಸಮೀಕ್ಷೆ, ಹೆಬ್ರಿ ತಾಲೂಕಿನಲ್ಲಿ 12,939 ಕುಟುಂಬಗಳು, 121 ಬ್ಲಾಕ್ಗಳು, 4703 ಮನೆಗಳ ಸಮೀಕ್ಷೆ, ಬ್ರಹ್ಮಾವರ ತಾಲೂಕಿನಲ್ಲಿ 51,139 ಕುಟುಂಬಗಳು, 465 ಬ್ಲಾಕ್ಗಳು, 15,513 ಮನೆಗಳ ಸಮೀಕ್ಷೆ ಹಾಗೂ ಬೈಂದೂರು ತಾಲೂಕಿನಲ್ಲಿ 26,410 ಕುಟುಂಬಗಳು, 246 ಬ್ಲಾಕ್ಗಳು, 8,786 ಮನೆಗಳ ಸಮೀಕ್ಷೆ, ಮಾಡಲಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 70,971 ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿರುತ್ತದೆ. ಸಮೀಕ್ಷಾ ಕಾರ್ಯಕ್ಕಾಗಿ 3,158 ಗಣತಿದಾರರನ್ನು ನೇಮಿಸಲಾಗಿದೆ.

ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆಪ್ಟಂಬರ್ 22 ರಿಂದ ಜಿಲ್ಲೆಯಾದ್ಯಂತ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು ಯಡಮೊಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿಯೋಜನೆಗೊಂಡಿದ್ದ ಮಲ್ಲೇಶ್ ರವರು ತಮಗೆ ವಹಿಸಿದ್ದ ಸಮೀಕ್ಷಾ ಕರ್ತವ್ಯವನ್ನು ಕೇವಲ ಮೂರು ದಿನಗಳ ಒಳಗಾಗಿ ಪೂರ್ಣಗೊಳಿಸಿದ್ದು, ಅವರಿಗೆ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಸಮೀಕ್ಷೆ ಕಾರ್ಯವನ್ನು ನಾಗರಿಕರು ತಾವೇ ನೇರವಾಗಿ ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಏರ್ಪಡಿಸುವ ಶಿಬಿರದಲ್ಲಿ ಭಾಗವಹಿಸುವ ಮೂಲಕ https://kscbcselfdeclaration.karnataka.gov.in/ ನಲ್ಲಿ ಲಾಗಿನ್ ಆಗಿ ಸಮೀಕ್ಷಾ ಕಾರ್ಯದಲ್ಲಿ ದಾಖಲು ಮಾಡಿಕೊಳ್ಳಬಹುದಾಗಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments