ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆಯೇ ? – ಬ್ಲಾಕ್ ಕಾಂಗ್ರೆಸ್ ಪ್ರಶ್ನೆ

Spread the love

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆಯೇ ? – ಬ್ಲಾಕ್ ಕಾಂಗ್ರೆಸ್ ಪ್ರಶ್ನೆ

ಉಡುಪಿ : ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಒಳಗೆ ಇತ್ತೀಚಿಗೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದು ಕೂಡಲೇ ಸಮಸ್ಯೆ ಪರಿಹರಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.

ಕಳೆದ ಕೆಲವು ವರ್ಷಗಳಿಂದ ಭೂ ಪರಿವರ್ತನೆಗೊಂಡ ಸಮಯದಲ್ಲಿ ಮನೆ ನಿವೇಶನವನ್ನು ನಾಗರಿಕರು ಪಡೆದುಕೊಂಡಿರುತ್ತಾರೆ. ಕೆಲವರು ಆ ಸ್ಥಳದಲ್ಲಿ ಮನೆಯನ್ನು ಕಟ್ಟಿ ವಾಸ್ತವ್ಯ ಇದ್ದಾರೆ. ಇನ್ನೂ ಕೆಲವರು ತಮ್ಮ ನಿವೃತ್ತಿ ಜೀವನದ ಸಮಯದಲ್ಲಿ ಮನೆಯನ್ನು ಕಟ್ಟಿಕೊಳ್ಳುವ ಆಲೋಚನೆಯಲ್ಲಿದ್ದವರು ಈಗ ಮನೆ ಕಟ್ಟಲು ಆರಂಭಿಸುವಾಗ ಕಾನೂನಿನ ಅಡೆ ತಡೆಗಳಿಂದ ಉದಾಹರಣೆಗೆ ಏಕ ನಿವೇಶನ (ಸಿಂಗಲ್ ಲೇಔಟ್) ಮಾಡಬೇಕಾಗುತ್ತದೆ. ಆದರೆ ಅವರ ನಿವೇಶನದ ಸುತ್ತಲೂ ಮನೆ ನಿರ್ಮಾಣ ಆದುದರಿಂದ ಏಕ ನಿವೇಶನದ ಕಾನೂನಿನ ಪ್ರಕಾರ ನಡೆದುಕೊಳ್ಳಲು ಅಸಾಧ್ಯವಾಗುತ್ತಿದೆ. ಅಂಥಹ ನಿವೇಶನ ಹೊಂದಿದವರನ್ನು ಅಕ್ರಮ ಸಕ್ರಮಕ್ಕೆ ಅರ್ಜಿ ನೀಡಲು ಅಧಿಕಾರಿ ವರ್ಗವು ಸೂಚಿಸಿದೆ. ಆದರೆ ಅರ್ಜಿ ವಿಲೇವಾರಿಯು ಸೂಕ್ತ ಸಮಯದಲ್ಲಿ ಆಗದ ಕಾರಣ ಜನರು ಮನೆ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ.

ಈ ಬಗ್ಗೆ ಸರಕಾರ ಕೂಡಲೇ ಸ್ಪಂದಿಸಿದಲ್ಲಿ ಅಂಥಹ ನಿವೇಶನದಾರರಿಗೆ ಮನೆ ಕಟ್ಟಲು ಪರಿಹಾರ ದೊರಕಿದಂತಾಗುತ್ತದೆ. ಮನೆ ಇಲ್ಲದವರಿಗೆ ಸ್ವಂತ ಮನೆ ಕಟ್ಟಲು ಅವರ ಕೃಷಿ ಭೂಮಿಯಲ್ಲಿ ಭೂ ಪರಿವರ್ತನೆಗೊಂಡ 10 ಸೆಂಟ್ಸ್ ಜಾಗದಲ್ಲಿ ಈ ಹಿಂದೆ ಪ್ರಾಧಿಕಾರ ಅನುಮತಿ ನೀಡುತ್ತಿತ್ತು. ಈಗ ಕೃಷಿ ಭೂಮಿಯಲ್ಲೂ ಮನೆ ಕಟ್ಟಲು ಆಗುತ್ತಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಪ್ರಾಧಿಕಾರದ ಯಾವುದೇ ಕೆಲಸ ಕಾರ್ಯಗಳಲ್ಲಿ ಅಧಿಕಾರಿ ವರ್ಗದ ನಿಧಾನಗತಿ ಸಲ್ಲದು. ಆದುದರಿಂದ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಪರಿಹರಿಸಲು ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ, ಉಡುಪಿ ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ವಿನಂತಿಸಿದ್ದಾರೆ.


Spread the love