ಎಟಿಎಂ ಹಣ ದುರುಪಯೋಗ ಹಾಗೂ ಚಿನ್ನ ವಂಚನೆ: ಬ್ಯಾಂಕ್ ಆಫ್ ಬರೋಡಾ ಜಂಟಿ ವ್ಯವಸ್ಥಾಪಕನ ವಿರುದ್ಧ ಪ್ರಕರಣ

Spread the love

ಎಟಿಎಂ ಹಣ ದುರುಪಯೋಗ ಹಾಗೂ ಚಿನ್ನ ವಂಚನೆ: ಬ್ಯಾಂಕ್ ಆಫ್ ಬರೋಡಾ ಜಂಟಿ ವ್ಯವಸ್ಥಾಪಕನ ವಿರುದ್ಧ ಪ್ರಕರಣ

ಉಪ್ಪಿನಂಗಡಿ: ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಎಟಿಎಂ ನಗದು ನಿರ್ವಹಣೆಯಲ್ಲಿ ಗಂಭೀರ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕ್‌ನ ಜಂಟಿ ವ್ಯವಸ್ಥಾಪಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತನನ್ನು ಪುಲುಗುಜ್ಜು ನಿವಾಸಿ ಸುಬ್ರಹ್ಮಣ್ಯಂ (30) ಎಂದು ಗುರುತಿಸಲಾಗಿದ್ದು, ಆತ ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯಲ್ಲಿ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದನು. ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯೂ ಆರೋಪಿತನಿಗೇ ಇದ್ದುದು ಎಂದು ತಿಳಿದುಬಂದಿದೆ.

ದಿನಾಂಕ 04-09-2023 ರಿಂದ 19-12-2025ರ ಅವಧಿಯಲ್ಲಿ, ವಿಶೇಷವಾಗಿ 06-02-2024 ರಿಂದ 16-12-2025ರವರೆಗೆ ಎಟಿಎಂಗೆ ನಿಗದಿತ ಪ್ರಮಾಣದ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ಒಟ್ಟು ರೂ.70,86,000/- ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ, ದಿನಾಂಕ 19-12-2025ರಂದು ಸೇಫ್ ಲಾಕರ್ ಪರಿಶೀಲನೆ ವೇಳೆ ರೂ.55,000/- ಮೌಲ್ಯದ 4.400 ಗ್ರಾಂ ಚಿನ್ನವೂ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.

ಹಣದ ದುರುಪಯೋಗ ಪತ್ತೆಯಾಗುತ್ತಿದ್ದಂತೆ ಆರೋಪಿತನು ದಿನಾಂಕ 17-12-2025ರಂದು ಯಾರಿಗೂ ತಿಳಿಸದೇ ಕೆಲಸದಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಒಟ್ಟು ವಂಚನೆಯ ಮೌಲ್ಯ ರೂ.71,41,000/- ಆಗಿರುತ್ತದೆ.

ಈ ಕುರಿತು ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕರಾದ ಜೆಪ್ಪು ಮಂಗಳೂರು ನಿವಾಸಿ ಶ್ರೀ C.V.S. ಚಂದ್ರಶೇಖರ್ (50) ಅವರು ದಿನಾಂಕ 23-12-2025ರಂದು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025ರ ಅಡಿಯಲ್ಲಿ, BNS–2023ರ ಕಲಂ 314, 316(5) ಮತ್ತು 318(2) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments