ಐಸಿಎಐ ಬೆಂಗಳೂರು ಶಾಖೆ ಅಧ್ಯಕ್ಷರಾಗಿ ಸಿಎ ಗೀತಾ ಎಬಿ ಆಯ್ಕೆ

Spread the love

ಐಸಿಎಐ ಬೆಂಗಳೂರು ಶಾಖೆ ಅಧ್ಯಕ್ಷರಾಗಿ ಸಿಎ ಗೀತಾ ಎಬಿ ಆಯ್ಕೆ

ಬೆಂಗಳೂರು: ಲೆಕ್ಕ ಪರಿಶೋಧಕರ ಸಂಘಟನೆಯಾದ ಐಸಿಎಐ ಬೆಂಗಳೂರು ಶಾಖೆಯ ನೂತನ ಅಧ್ಯಕ್ಷರಾಗಿ ಸಿಎ ಗೀತಾ ಎಬಿ ಆಯ್ಕೆಯಾಗಿದ್ದಾರೆ. ಬೆಂಗಳೂರು ಶಾಖೆಯ 55 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷ ಹುದ್ದೆ ಅಲಂಕರಿಸಿದ ಮೊದಲ ಮಹಿಳಾ ಸಿಎ ಎಂಬ ಹೆಗ್ಗಳಿಕೆ ಸಿಎ ಗೀತಾ ಎಬಿ ಅವರದ್ದಾಗಿದೆ.

ಇತ್ತೀಚೆಗೆ ನಡೆದ ಐಸಿಎಐ 23 ನೇ ಕೌನ್ಸಿಲ್ ಸಭೆಯಲ್ಲಿ ಗೀತಾ ಎಬಿ ಅವರನ್ನು ಬೆಂಗಳೂರು ಶಾಖೆಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಐಸಿಎಐ ಬೆಂಗಳೂರು ಶಾಖೆಯನ್ನು 1962 ರಲ್ಲಿ ಸ್ಥಾಪಿಸಲಾಗಿತ್ತು. ಪ್ರಸ್ತುತ 13,500 ಸಿಎಗಳು ಹಾಗೂ 30,000 ಕ್ಕೂ ಅಧಿಕ ಸಿಎ ವಿದ್ಯಾರ್ಥಿಗಳು ಈ ಶಾಖೆಯಲ್ಲಿ ನೋಂದಾಯಿತರಾಗಿದ್ದಾರೆ. ದಿ ಇನ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಚಾರ್ಟರ್ಡ್ ಅಕೌಂಟಂಟ್ಸ್ ಕಾಯ್ದೆ 1949 ಮೂಲಕ ಸ್ಥಾಪನೆಗೊಂಡ ಒಂದು ಕಾನೂನು ಬದ್ಧ ಸಂಸ್ಥೆಯಾಗಿದ್ದು, ಭಾರತದಲ್ಲಿ ಲೆಕ್ಕಪರಿಶೋಧನಾ ವೃತ್ತಿಯನ್ನು ಇದು ನಿಯಂತ್ರಿಸುತ್ತದೆ.

ಸಿಎ ಗೀತಾ ಕಳೆದ 13 ವರ್ಷಗಳಿಂದ ಸಿಎಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನೇರ ತೆರಿಗೆ ಹಾಗೂ ಲೆಕ್ಕಪರಿಶೋಧನೆಯಲ್ಲಿ ವಿಶೇಷತೆ ಹೊಂದಿದ್ದಾರೆ. ಸಿಎ ಗೀತಾ ಎಬಿ ಅವರು ಐಸಿಎಐನ ಬೆಂಗಳೂರು ಶಾಖೆಯ ಕಾರ್ಯದರ್ಶಿ, ಖಜಾಂಚಿ, ವಿದ್ಯಾರ್ಥಿ ವಿಭಾಗದ ಮುಖ್ಯಸ್ಥೆ ಹೀಗೆ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದರು. ಅವರು ಐಸಿಎಐ ಕರ್ನಾಟಕ ಶಾಖೆಯಲ್ಲಿ ನಾನಾ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಮಹಿಳಾ ಉದ್ಯಮಶೀಲರ ಸಂಸ್ಥೆಯಾದ ಅವೇಕ್‍ನ ಸದಸ್ಯೆಯಾಗಿ ಕೂಡಾ ಅವರು ಸೇವೆ ಸಲ್ಲಿಸಿದ್ದಾರೆ. ಲೆಕ್ಕ ಪರಿಶೋಧಕ ವೃತ್ತಿಪರರಿಗೆ ಇನ್ನಷ್ಟು ನೆರವಾಗುವುದಲ್ಲದೆ, ವಿದ್ಯಾರ್ಥಿ ಹಾಗು ಸಂಘದ ಸದಸ್ಯರಿಗೆ ಜತೆಗೆ ಸಮಾಜಕ್ಕೆ ಇನ್ನಷ್ಟು ನೆರವಾಗುವ ಕಾರ್ಯಕ್ರಮ ಸಂಘಟಿಸಿ ದೇಶದ ಅಭಿವೃದ್ಧಿಗೆ ಕಾಣಿಕೆ ನೀಡುವ ಮಹತ್ತರ ಗುರಿಯನ್ನು ಸಿಎ ಗೀತಾ ಎಬಿ ಹೊಂದಿದ್ದಾರೆ.


Spread the love