ಕರಾವಳಿಯ ಬ್ಯಾಂಕುಗಳ ವಿಲೀನ – ಪ್ರಖ್ಯಾತ್ ಶೆಟ್ಟಿ ಖಂಡನೆ

ಕರಾವಳಿಯ ಬ್ಯಾಂಕುಗಳ ವಿಲೀನ – ಪ್ರಖ್ಯಾತ್ ಶೆಟ್ಟಿ ಖಂಡನೆ

ಉಡುಪಿ: ಕರಾವಳಿ ಭಾಗದಲ್ಲಿ ಹುಟ್ಟಿ ಇಡೀ ದೇಶಾದ್ಯಂತ ತಮ್ಮ ಬೇರುಗಳನ್ನು ಪಸರಿಸಿದ್ದ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕುಗಳು ಇದೀಗ ವಿಲೀನ ಪ್ರಕ್ರಿಯೆಗೆ ಒಳಪಡಿಸಲಿರುವ ಕೇಂದ್ರ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ ಅಜ್ಞಾನದಿಂದ ದೇಶದ ಬ್ಯಾಂಕಿಂಗ್ ವಲಯ ದಿವಾಳಿಯತ್ತ ಸಾಗುತ್ತಿದ್ದು ಇದರಿಂದ ಹಲವಾರು ಬ್ಯಾಂಕುಗಳು ನಷ್ಟದತ್ತ ಸಾಗಲು ಕಾರಣವಾಗಿದೆ. ಕರಾವಳಿ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತೊಟ್ಟಿಲಾಗಿದ್ದು ದೇಶಕ್ಕೆ ಬ್ಯಾಂಕಿಂಗ್ ಕ್ಷೇತ್ರದ ಪರಿಚಯಿಸಿದ ಕೀರ್ತಿ ಕರಾವಳಿ ಜಿಲ್ಲೆಗಿದೆ. ಕಳೆದ ಬಾರಿ ಮೋದಿ ಸರಕಾರ ಲಾಭದಲ್ಲಿದ್ದ ವಿಜಯ ಬ್ಯಾಂಕನ್ನು ನಷ್ಟದಲ್ಲಿದ್ದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಿದಾಗಲೂ ಕೂಡ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲದೆ ಮುಂದೆ ಉಳಿದ ಬ್ಯಾಂಕುಗಳ ವಿಲೀನದ ಕುರಿತು ಎಚ್ಚರಿಕೆ ನೀಡಿದ್ದು ಈಗ ಅದು ಸತ್ಯವಾಗುತ್ತಿದೆ.

ಶುಕ್ರವಾರ ದೇಶದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರಾವಳಿಯ ಕಾರ್ಪೊರೇಶನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕುಗಳನ್ನು ವಿಲೀನ ಮಾಡಿ ಮತ್ತೊಮ್ಮೆ ಕರಾವಳಿಗರಿಗೆ ದ್ರೋಹವೆಸಗುವ ಕೆಲಸ ಕೆಂದ್ರ ಸರಕಾರ ಮಾಡಿದ್ದು ಖಂಡನೀಯ. ಇನ್ನಾದರೂ ಕೇಂದ್ರ ಸರಕಾರ ಎಚ್ಚೆತ್ತು ಕರಾವಳಿಯ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು. ಕರಾವಳಿಯ ಎರಡು ಜಿಲ್ಲೆಗಳಿಂದ ಆಯ್ಕೆಯಾದ ಬಿಜೆಪಿ ಸಂಸದರು ಮತ್ತು ಶಾಸಕರು ಇನ್ನಾದರೂ ಈ ಬಗ್ಗೆ ಮೌನ ಮುರಿದು ಕರಾವಳಿಯ ಬ್ಯಾಂಕುಗಳನ್ನು ಉಳಿಸುವತ್ತ ಗಮನ ಹರಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.