ಕಾರ್ಕಳ : ಪರಪ್ಪಾಡಿ ಅರ್ಬಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವ ನೀರುಪಾಲು

ಕಾರ್ಕಳ : ಪರಪ್ಪಾಡಿ ಅರ್ಬಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವ ನೀರುಪಾಲು

ಕಾರ್ಕಳ : ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ ಇಬ್ಬರು ಯುವಕರ ಪೈಕಿ ಓರ್ವ ನಾಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ.

ನಾಪತ್ತೆಯಾದ ಯುವಕನನ್ನು ನಂದಳಿಕೆ ಗ್ರಾಮದ ಕೆದಿಂಜೆ ಮಂಜರಪಲ್ಕೆಯ ಅಬ್ಬನಡ್ಕ ನಿವಾಸಿ ಕೃಷ್ಣ ಮೂಲ್ಯ ಎಂಬವರ ಪುತ್ರ ಸುದೇಶ್(26) ಎಂದು ಗುರುತಿಸಲಾಗಿದೆ.

ಇನ್ನೋರ್ವ ಯುವಕ ಬೋಳ ಪದವು ಚರ್ಚ್ ಬಳಿಯ ನಿವಾಸಿ ರಾಜು ಎಂಬವರ ಮಗ ರಾಕೇಶ್ (24) ಈಜಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಸುದೇಶ್ ಮತ್ತು ರಾಕೇಶ್ ನಂದಳಿಕೆಯ ಭರತ್ ಪೂಜಾರಿ(31) ಹಾಗೂ ಸಂತೋಷ್(24) ಎಂಬವರೊಂದಿಗೆ ಸೆಲ್ಫಿ ತೆಗೆಯಲು ಅರ್ಬಿ ಫಾಲ್ಸ್ಗೆ ಹೋಗಿದ್ದು, ತಮ್ಮ ಮೊಬೈಲ್ನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಸುದೇಶ್ ಹಾಗೂ ಭರತ್ ಕಾಲು ಜಾರಿ ನೀರಿಗೆ ಬಿದ್ದರೆನ್ನಲಾಗಿದೆ. ಇವರಲ್ಲಿ ಭರತ್ ಈಜಿಕೊಂಡು ಮೇಲೆ ಬಂದಿದ್ದು, ಸುದೇಶ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಘಟನಾ ಸ್ಥಳದಲ್ಲಿ ಕಾರ್ಕಳ ತಹಶೀಲ್ದಾರ್, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ನಾಸೀರ್ ಹುಸೈನ್, ಇ.ಒ ಹರ್ಷ ಹಾಗೂ ಅಗ್ನಿಶಾಮಕ ದಳದವರು ಹಾಜರಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.