ವಿಜೃಂಭಣೆಯಿಂದ ಜರುಗಿದ ಕಲ್ಮಾಡಿ ಚರ್ಚಿನ ವಾರ್ಷಿಕ ಪ್ರತಿಷ್ಠಾಪನೋತ್ಸವ ; ಸಾವಿರಾರು ಭಕ್ತಾದಿಗಳು ಭಾಗಿ

Spread the love

ವಿಜೃಂಭಣೆಯಿಂದ ಜರುಗಿದ ಕಲ್ಮಾಡಿ ಚರ್ಚಿನ ವಾರ್ಷಿಕ ಪ್ರತಿಷ್ಠಾಪನೋತ್ಸವ ; ಸಾವಿರಾರು ಭಕ್ತಾದಿಗಳು ಭಾಗಿ

ಉಡುಪಿ: ಮೇರಿ ಮಾತೆಯಂತೆ ದೇವರ ವಾಕ್ಯದಂತೆ ನಡೆಯುವುದರೊಂದಿಗೆ ಸಮಾಜದಲ್ಲಿ ನಿಸ್ವಾರ್ಥ ಸೇವೆಯನ್ನು ನೀಡುವ ಗುಣವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಗುರುವಾರ ಸಂಜೆ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನಲ್ಲಿ ವೆಲಂಕಣಿ ಮಾತೆಯ ಪ್ರತಿಷ್ಠಾಪನಾ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.

ಮೇರಿ ಮಾತೆ ಸಾಮಾನ್ಯ ಕುಟುಂಬಂದಿಂದ ಬಂದು ಸಾಮಾನ್ಯರಂತೆ ಬದುಕಿ ತೋರಿಸಿದ್ದಲ್ಲದೆ ದೇವರ ವಾಕ್ಯದಂತೆ ನಡೆದು ನಿಸ್ವಾರ್ಥ ಸೇವೆಗೈದು ಮಾದರಿಯಾದರು. ಅವರು ತಮ್ಮ ಜೀವನವನ್ನೇ ದೈವ ಸೇವೆ ಸಮರ್ಪಿಸಕೊಂಡಿದ್ದಲ್ಲದೆ ಯೇಸು ಸ್ವಾಮಿಯ ಒರ್ವ ಮಾದರಿ ತಾಯಿಯಾಗಿ ಬದುಕಿದರು ಅವರ ಆದರ್ಶ  ಗುಣಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ಉಡುಪಿ ವಲಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೊನ್ಸಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ, ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ವಿವಿಧ ಚರ್ಚುಗಳ ಸುಮಾರು 20ಕ್ಕೂ ಅಧಿಕ ಧರ್ಮಗುರುಗಳು ಹಬ್ಬದ ಬಲಿಪೂಜೆಯಲ್ಲಿ ಭಾಗವಹಿಸಿದ್ದರು.

ಚರ್ಚಿನ ಪ್ರಧಾನ ಧರ್ಮಗುರು ವಂ|ಆಲ್ಬನ್ ಡಿಸೋಜಾ, ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಂಚಾಲಕ ವಂ| ಪ್ರವೀಣ್ ಮೊಂತೆರೋ,   ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, ಚರ್ಚಿನ 18 ಆಯೋಗಗಳ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಚರ್ಚಿನ ಪ್ರಧಾನ ಧರ್ಮಗುರು ವಂ|ಆಲ್ಬನ್ ಡಿಸೋಜಾ ಹಬ್ಬದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ಪ್ರಧಾನ ಪೋಷಕರಿಗೆ ಧರ್ಮಾಧ್ಯಕ್ಷರು ಗೌರವಿಸಿದರು.

ಹಬ್ಬದ ಪ್ರಯಕ್ತ ಬೆಳಿಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯಬಲಿಪೂಜೆ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಯಿತು. 2 ಗಂಟೆಗೆ ಕೊಂಕಣಿಯಲ್ಲಿ,‌ ಸಂಜೆ 6 ಗಂಟೆಗೆ ಕನ್ನಡದಲ್ಲಿ ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷ್‌ನಲ್ಲಿ ಬಲಿಪೂಜೆಗಳು ಜರುಗಿದವು.

ಹಬ್ಬದ ದಿನ ಬೆಳಿಗ್ಗಿನಿಂದ ಸಂಜೆಯ ತನಕ ಹತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ವಿವಿಧ ಬಲಿಪೂಜೆಗಳಲ್ಲಿ ಭಾಗವಹಿಸಿ ತಮ್ಮ ಹರಕೆಗಳನ್ನು ತೀರಿಸಿ ಮೇರಿ ಮಾತೆಯ ಕೃಪಾವರಗಳನ್ನು ಪಡೆದು ಕೃತಾರ್ಥರಾದರು.

ಚಿತ್ರಗಳು: ಪ್ರವೀಣ್, ಸ್ಯಾನಿ ಡಿಜಿಟಲ್ಸ್ ಕಲ್ಮಾಡಿ

Click Here to View More Photos 


Spread the love