ಕುಂದಾಪುರ ಕನ್ನಡ ಶುದ್ದವಾಗಿದೆ: ಎಸಿ ರಶ್ಮಿ ಎಸ್.ಆರ್

Spread the love

ಕುಂದಾಪುರ ಕನ್ನಡ ಶುದ್ದವಾಗಿದೆ: ಎಸಿ ರಶ್ಮಿ ಎಸ್.ಆರ್

ಕುಂದಾಪುರ: ಭಾರತಾಂಭೆಯ ಮಗಳು ನಮ್ಮ ಕನ್ನಡಾಂಭೆ. ಕರ್ನಾಟಕ ಎಂದರೆ ಕನ್ನಡ ಮಾತನಾಡುವ ಜನರು. ಕನ್ನಡ ಭಾಷೆಯಲ್ಲಿ ವಿಭಿನ್ನತೆ ಇದೆ. ಧಾರವಾಡ ಕನ್ನಡ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡದಲ್ಲಿ ಬಹಳ ವೈವಿಧ್ಯತೆ ಇದೆ. ಕುಂದಾಪುರ ಕನ್ನಡ ಶುದ್ದವಾಗಿದೆ. ಈ ಶುದ್ದ ಕನ್ನಡವನ್ನು ಕಲಿಯುವ ಹಂಬಲ ನನ್ನದು. ಈ ಪ್ರಯತ್ನದಲ್ಲಿ ಸಫಲವಾಗುವ ನಂಬಿಕೆಯೂ ಇದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್ ಆರ್ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತ, ಕುಂದಾಪುರ ಪುರಸಭೆ ವತಿಯಿಂದ ಜರುಗಿದ 68 ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣಗೈದು ಅವರು ಮಾತನಾಡಿದರು.

ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ. ಇದು ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸವನ್ನು ಬಿಂಬಿಸುತ್ತದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭಾಷೆಯನ್ನು ನಾವು ಬೆಳೆಸಬೇಕು. ಕನ್ನಡ ಮಾಧ್ಯಮ ಶಾಲೆಗಳು ಬೆಳೆಯಬೇಕು. ಕನ್ನಡ ಮಾಧ್ಯಮ ಶಾಲೆಗಳು ಎಂದರೆ ಪೋಷಕರು ಹಿಂದೇಟು ಹಾಕುತ್ತಾರೆ. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತವರು ಇಂದು ಮಹೋನ್ನತ ಹುದ್ದೆಯನ್ನು ಅಲಂಕರಿಸಿರುವುದು ಗಮನದಲ್ಲಿರಲಿ ಎಂದರು.

ಕರ್ನಾಟಕ, ಕರುನಾಡು, ಕನ್ನಡಾಂಭೆ ಎಂಬೆಲ್ಲಾ ಹೆಸರುಗಳಿಂದ ಕರೆಯಲ್ಪಡುವ ಕರ್ನಾಟಕದ ಇತಿಹಾಸವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕನ್ನಡ ಏಕೀಕರಣಕ್ಕೆ ಬಹಳಷ್ಟು ಹೋರಾಟಗಳು ನಡೆದಿವೆ. ಆಲೂರು ವೆಂಕಟರಾವ್, ಕೋಟ ಶಿವರಾಮ ಕಾರಂತ್, ರಾಷ್ಟ್ರಕವಿ ಕುವೆಂಪು ಮೊದಲಾದ ಮಹನೀಯರು, ಸಾಹಿತಿಗಳು ಪಾಲ್ಗೊಂಡು 1956 ರಲ್ಲಿ ಮೈಸೂರು ರಾಜ್ಯ ಸ್ಥಾಪನೆಯಾಯಿತು. 1973 ರಲ್ಲಿ ಇದಕ್ಕೆ ಕರ್ನಾಟಕ ಎಂದು ಮರು ನಾಮಕರಣವಾಯಿತು ಎಂದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಶೋಭಾ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್, ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖಾಧಿಕಾರಿ ಕುಸುಮಾಕರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ಪುಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಪ್ರಭಾಕರ ವಿ, ಪ್ರಭಾವತಿ ಶೆಟ್ಟಿ, ಸಂದೀಪ್ ಖಾರ್ವಿ ಸಂತೋಷ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸಿಪಿಐ ಜಯರಾಮ್ ಗೌಡ, ನಗರ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ಗಂಗೊಳ್ಳಿ ಕ್ರೈಂ ಪಿಎಸ್ಐ ಬಸವರಾಜ್ ಕನಶೆಟ್ಟಿ ಮತ್ತಿತರರು ಇದ್ದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love