ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆ

Spread the love

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆ

ಮಂಗಳೂರು : ಮಕ್ಕಳಿಗೆ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ಪೀಡಿಯಾಟ್ರಿಕ್ ಹೆಮಟಾಲಜಿ ಆಂಕಾಲಜಿ ವಿಭಾಗ ಹೊಂದಿರುವ ಜಿಲ್ಲೆಯ ಏಕೈಕ ಆಸ್ಪತ್ರೆಯಾದ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆಯನ್ನು ಆಸ್ಪತ್ರೆಯ ಸಂಜೀವಿನಿ ಸಭಾಂಗಣದಲ್ಲಿ ದಿನಾಂಕ 15.02.2022 ರಂದು ಆಚರಿಸಲಾಯಿತು.

ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥರಾದ ಡಾ. ಹರ್ಷಪ್ರಸಾದ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಮಕ್ಕಳ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಕ್ಕಳಿಗೆ ಮತ್ತವರ ಕುಟುಂಬಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಕಳೆದ 8 ವರ್ಷಗಳಿಂದ ಅಂತರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಈ 8 ವರ್ಷದಲ್ಲಿ ನಾವು 542 ಕ್ಯಾನ್ಸರ್ ಪೀಡಿತ ಮಕ್ಕಳನ್ನು ಪತ್ತೆ ಹಚ್ಚಿದ್ದು, ಇವರಲ್ಲಿ 402 ಮಕ್ಕಳು ಚಿಕಿತ್ಸೆಯನ್ನು ಪಡೆದಿರುತ್ತಾರೆ.

ಭಾರತದಲ್ಲಿ ವರ್ಷಕ್ಕೆ ಸುಮಾರು 50000 ರಷ್ಟು ಮಕ್ಕಳ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಆದರೆ ದುಖಃದ ಸಂಗತಿಯೆಂದರೆ ಮಕ್ಕಳ ಕ್ಯಾನ್ಸರ್ ಪ್ರಕರಣಗಳಲ್ಲಿ 10 ಮಕ್ಕಳಲ್ಲಿ ಕೇವಲ ಒಂದು ಮಗು ಮಾತ್ರ ಸಂಪೂರ್ಣ ಚಿಕಿತ್ಸೆಯನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯ ಮಕ್ಕಳ ಕ್ಯಾನ್ಸರ್‍ಗಳಾದ ಲಿಂಫೋಮ ಮತ್ತು ಲ್ಯುಕೇಮಿಯಾವನ್ನು ಗುಣಪಡಿಸುವ ಪ್ರಮಾಣವು ಅಭಿವೃದ್ದಿ ಹೊಂದಿದ ದೇಶಗಳಲ್ಲಿ 80% ಕ್ಕಿಂತ ಹೆಚ್ಚಿದ್ದರೆ ಭಾರತದಲ್ಲಿ ಇದು 30% ಕ್ಕಿಂತ ಕಡಿಮೆ ಇದೆ ಆದರೆ ಈ ರೀತಿಯ ಅರಿವು ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದರ ಮೂಲಕ ಪೋಷಕರು ತಮ್ಮ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆಯನ್ನು ನೀಡುವಂತೆ ಪ್ರೋತ್ಸಾಹಿಸಬಹುದು ಎಂದುಹೇಳಿದರು.

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ಸರಕಾರಿ ವಿಮೆ ಹಾಗೂ ಬೇರೆ ಬೇರೆ ದಾನಿಗಳ ಸಹಾಯದ ಮೂಲಕ ಮಕ್ಕಳಿಗೆ ನಿರಂತರವಾದ ಚಿಕಿತ್ಸೆಯನ್ನು ಕೊಡಲು ಸತತವಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿüಕಾರಿಯಾಗಿರುವ ಡಾ. ಕಿಶೋರ್ ಕುಮಾರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉಧ್ಘಾಟಿಸಿ ಮಾತನಾಡಿ ಕ್ಯಾನ್ಸರ್ ರೋಗ ಅಂದ ತಕ್ಷಣ ನಾವು ಸ್ವಲ್ಪ ಗಲಿಬಿಲಿಗೊಳ್ಳುತ್ತೇವೆ. ಇದಕ್ಕಿರುವ ಚಿಕಿತ್ಸೆಯ ಬಗ್ಗೆ ಸ್ವಲ್ಪ ಭಯ ಮತ್ತು ಗೊಂದಲಗಳಿವೆ. ಆದರೆ ಪ್ರಸ್ತುತ ಕಾಲದಲ್ಲಿ ವೈದ್ಯಕೀಯ ವಿಜ್ಞಾನವು ಬಹಳ ಮುಂದುವರಿದಿದ್ದು ಎಲ್ಲಾ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆಯು ಲಭ್ಯವಿದೆ ಅದೇ ರೀತಿ ಕ್ಯಾನ್ಸರ್ ರೋಗಕ್ಕೆ ಕೂಡ ಚಿಕಿತ್ಸೆಯು ಲಭ್ಯವಿದ್ದು ಈ ಕಾಯಿಲೆಯನ್ನು ಕೂಡ ಗುಣಪಡಿಸಬಹುದಾಗಿದೆ. ಆದರೆ ಸರಿಯಾದ ಸಮಯದಲ್ಲಿ, ಸರಿಯಾದ ತಜ್ಞರ

ತಂಡದಿಂದÀ, ಸರಿಯಾದ ಸ್ಥಳದಲ್ಲಿ ಚಿಕಿತ್ಸೆಯು ದೊರಕಿದ್ದಲ್ಲಿ ಈ ಕಾಯಿಲೆಯಿಂದ ಗುಣಹೊಂದಬಹುದು. ಮಕ್ಕಳು ಕ್ಯಾನ್ಸರ್‍ನಿಂದ ಗುಣಹೊಂದುವ ಪ್ರಮಾಣವು 75% ರಷ್ಟಿದೆ, ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದರೆ ಇದು ಸಾಧ್ಯ. ಕ್ಯಾನ್ಸರ್ ಬಗ್ಗೆ ಭಯ ಹೊಂದುವ ಬದಲು ಶೀಘ್ರವಾಗಿ ಚಿಕಿತ್ಸೆಯನ್ನು ಪಡೆಯಬೇಕು ಎಂದು ತಿಳಿಸಿದರು ಹಾಗೂ ಮಕ್ಕಳ ಕ್ಯಾನ್ಸರ್ ಜಾಗೃತಿ ಹಾಗೂ ಚಿಕಿತ್ಸೆಯ ನಿಟ್ಟಿನಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರವು ಈವರೆಗೆ ಮಾಡಿಕೊಂಡು ಬಂದಿರುವÀ ಕಾರ್ಯಗಳನ್ನು ಶ್ಲಾಘಿಸಿದರು.

ಗೌರವಾನ್ವಿತ ಅತಿಥಿಗಳಾಗಿ ಆಹ್ವಾನಿತರಾಗಿದ್ದ ವಿಶ್ವವಿಖ್ಯಾತ ಜಾದೂಗಾರರಾಗಿರುವ ಶ್ರೀ. ಕುದ್ರೋಳಿ ಗಣೇಶ್ ರವರು ಮಾತನಾಡಿ, ಕೆಲವೊಮ್ಮೆ ನಮ್ಮಲ್ಲಿ ಎಷ್ಟೋ ಆರೋಗ್ಯವಂತ ಅಭ್ಯಾಸಗಳು ಇದ್ದರೂ ಕೂಡ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡಯಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಕ್ಯಾನ್ಸರ್ ಅನ್ನುವಂತದ್ದು ಗುಣಪಡಿಸಲು ಆಗುವುದೇ ಇಲ್ಲ ಎಂಬ ಮನೋಭಾವವನ್ನು ಈ ಜಗತ್ತಿನಿಂದ ಹೋಗಲಾಡಿಸಲು ಇವತ್ತು ನಾವು ಪಣತೊಡಬೇಕು. ತಮ್ಮ ತಂದೆಯವರು ಸುಮಾರು 20 ವರ್ಷದ ಹಿಂದೆ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಕ್ಯಾನ್ಸರ್ ಕ್ಷೇತ್ರದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದ ಕ್ಷಣಗಳನ್ನು ಹಾಗೂ ಅವರಿಗೆ ಚಿಕಿತ್ಸೆಯನ್ನು ನೀಡಿದ್ದ ವೈದ್ಯರನ್ನು ಹಾಗು ಶುಶ್ರೂಶಕಿಯರನ್ನು ಸ್ಮರಿಸಿಕೊಂಡರು. ಹಾಗೂ ತಾವು ಸಣ್ಣ ಪುಟ್ಟ ಜಾದೂಗಳ ಮೂಲಕ ಇತರೆ ರೋಗಿಗಳಿಗೆ ನೀಡುತ್ತಿದ್ದ ಮನರಂಜನೆಯನ್ನು ಕೂಡ ನೆನಪಿಸಿಕೊಂಡರು. ಇಂತಹ ಒಳ್ಳೆಯ ಕಾರ್ಯಕ್ರಮಗಳಲ್ಲಿ ಇನ್ನು ಮುಂದೆಯೂ ಕೂಡ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಜೊತೆ ಕೈ ಜೋಡಿಸಿ ರೋಗಿಗಳಿಗೆ ಮನರಂಜನೆಯನ್ನು ನೀಡಲು ತಾನು ಸಿದ್ದನಿದ್ದೇನೆ ಎಂದು ತಿಳಿಸಿದರು.

ಚಿಕಿತ್ಸೆ ಹಾಗೂ ಈ ರೀತಿಯ ಮನರಂಜನೆಗಳ ಮೂಲಕ ರೋಗಿಗಳ ಮಾನಸಿಕ ಸ್ಥೈರ್ಯವು ಹೆಚ್ಚುವುದಾಗಿ ಅಂತರಾಷ್ಟ್ರೀಯ ಚಿಕಿತ್ಸಾ ಪದ್ದತಿಗಳೂ ಸಾಬೀತುಪಡಿಸಿವೆ ಎಂದು ತಿಳಿಸಿದರು ಹಾಗೂ ತಮ್ಮ ಜಾದೂಗಳ ಮೂಲಕ ಮಕ್ಕಳನ್ನು ಹಾಗೂ ನೆರೆದವರನ್ನು ಒಂದು ಗಂಟೆಗೂ ಹೆಚ್ಚು ಕಾಲ ರಂಜಿಸಿದರು.

ಕೆ.ಎಂ.ಸಿ. ಮಂಗಳೂರಿನ ಡೀನ್ ಡಾ. ಬಿ. ಉನ್ನಿಕೃಷ್ಣನ್ ಮಾತನಾಡಿ, “ಈ ಕಾರ್ಯಕ್ರಮದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಮಕ್ಕಳ ಕ್ಯಾನ್ಸರ್‍ಗೆ ಅತ್ಯುತ್ತಮವಾದ ಚಿಕಿತ್ಸೆಯು ಲಭ್ಯವಿದೆ ಅದೇ ರೀತಿ ಅತ್ಯುತ್ತಮ ತಜ್ಞರ ಹಾಗೂ ಆರೈಕೆದಾರದ ತಂಡವೂ ಇದೆ. ಆದರೆ ಸರಿಯಾದ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದು ಚೇತರಿಕೆ ಹೊಂದಲು ಮಕ್ಕಳು ಹಾಗೂ ಪೋಷಕರೊಂದಿಗೆ ಸಾಮಾಜದ ಪಾತ್ರವೂ ಸಹ ನಿರ್ಣಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ನಾನು ನವ ದಂಪತಿಗಳಾದ ಶ್ರೀ. ಸೈಹಿಲ್ ರೈ ಹಾಗೂ ಶ್ರೀಮತಿ ಸುಶ್ಮಿತಾ ಶೆಟ್ಟಿ ಯವರ ಕಾರ್ಯವನ್ನು ನಾನು ಶ್ಲಾಘಿಸುತ್ತೇನೆ. ಇವರಂತೆ ಅನೇಕ ಯುವ ಜನರು ಪ್ರೇರೇಪಣೆಗೊಂಡು ಇಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಕ್ಯಾನ್ಸರ್‍ಗೆ ಚಿಕಿತ್ಸೆಯನ್ನು ಪಡೆದು ಗುಣಮುಖವಾಗಿರುವ ಮಗು ವಿವೇಕ್‍ನ ತಂದೆಯಾದ ಶ್ರೀ. ವಾಸುದೇವ ಭಟ್ ರವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ತನ್ನ ಮಗನ ಚಿಕಿತ್ಸೆಯ ಬಗ್ಗೆ ಹಾಗೂ ಹೆತ್ತವರು ತಮ್ಮ ಮಕ್ಕಳ ಚಿಕಿತ್ಸೆಯ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ, ಕಾಳಜಿ ಬಗ್ಗೆ ತಿಳಿಸಿದರು ಹಾಗೂ ತಮ್ಮ ಮಗನಿಗೆ ಚಿಕಿತ್ಸೆಯನ್ನು ನೀಡಿದ ವೈದ್ಯರನ್ನು ಹಾಗೂ ಶುಶ್ರೂಶಕಿಯರನ್ನು ಸ್ಮರಿಸಿ ವಂದಿಸಿದರು. ಹಾಗೂ ಇದೇ ಸಮಯದಲ್ಲಿ ವಿವೇಕ್‍ರವರು ತಾವು ರಚಿಸಿದ ಶ್ರೀ. ಕುದ್ರೋಳಿ ಗಣೇಶ್ ರವರ ರೇಖಾ ಚಿತ್ರವನ್ನು ಗೌರವಾನ್ವಿತ ಅತಿಥಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನವ ದಂಪತಿಗಳಾದ ಶ್ರೀ. ಸೈಹಿಲ್ ರೈ ಹಾಗೂ ಶ್ರೀಮತಿ ಸುಶ್ಮಿತಾ ಶೆಟ್ಟಿ ಯವರು ಕ್ಯಾನ್ಸರ್‍ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಬೆಂಬಲ ವ್ಯಕ್ತಪಡಿಸಿ ರೂ. 25000 ಚೆಕ್ಕನ್ನು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ
ವೈದ್ಯಕೀಯ ಅಧೀಕ್ಷಕರಿಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗಾಗಿ ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ ಕೇರ್ ಚೈಲ್ಡ್ ಸಂಸ್ಥೆಯ ಸಮಾಜ ಸೇವಕರಾದ ಶ್ರೀ. ಹೆರಾಲ್ಡ್ ಮೋರಾಸ್, ಅಇಆSಇ ಇದರ ಮ್ಯಾನೇಜಿಂಗ್ ಟ್ರಸ್ಟೀ ಡಾ. ರೀಟಾ ನೊರೊನ್ಹಾ, ಸಂಯೋಜಕರಾದ ಘಾನಾಶ್ರೀ, ತಪಸ್ಯ ಫೌಂಡೇಶನ್‍ನ ಟ್ರಸ್ಟೀಗಳಾದ ಸಬಿತಾ ಶೆಟ್ಟಿ, ಬೆಲ್ಳಿಪಾಡಿ  ಹರಿಪ್ರಸಾದ್ ರೈ ಹಾಗೂ ಮೋಹನ್ ಶೆಟ್ಟಿ, ರೋಟರಿ ಇನ್ನೋವೇಟ್ ಕ್ಲಬ್‍ನ ಡಾ. ಭಾರತಿ, ಜ್ಯುವೆಲ್ಸ್ ಚಾರಿಟಿಯ ಶ್ರೀ. ಪ್ರವೀಣ್ ಹಾಗೂ ಹಾಗೂ ಇನ್ಫಿನಿಟಿ ಎಂಟರ್ಟೈನ್‍ಮೆಂಟ್‍ನ ಮಾಲೀಕರಾದ ಶ್ರೀ ಧರ್ಮಿತ್ ರೈ ಇವರನ್ನು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಹಾಗೂ ವಿ.ಜೆ. ಡಿಕ್ಸನ್ ಇವರು ಮಕ್ಕಳಿಗೆ ಮನರಂಜನಾ ಚಟುವಟಿಕೆಗನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ವೈದ್ಯಕೀಯ ಅಧೀಕ್ಷಕರಾದ ಡಾ. ಜಾನ್ ರಾಮಪುರಮ್, ಮಕ್ಕಳ ರೋಗ ವಿಭಾಗದ ಪ್ರೊಫೆಸರ್ ಹಾಗೂ ಯುನಿಟ್ ಚೀಫ್ ಡಾ. ನೂತನ್ ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ. ಹರ್ಷಪ್ರಸಾದ್ ರವರು ಸ್ವಾಗತಿಸಿ, ಡಾ. ನೂತನ್ ಕಾಮತ್ ವಂದಿಸಿದರು. ಮಕ್ಕಳ ರೋಗ ವಿಭಾಗದ ಡಾ. ಕೀರ್ತಿ ಹಾಗೂ ಡಾ. ಅನುರಾಗ್ ಕಾರ್ಯಕ್ರಮವನ್ನು ನಿರ್ವಹಿಸಿದರು.


Spread the love