ಕೇರಳ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಕಳ್ಳ

ಕೋಟ: ಕಳ್ಳತನ ವಿಚಾರದಲ್ಲಿ ಕೇರಳ ಪೊಲೀಸರಿಗೆ ಗೆ ಬೇಕಾಗಿದ್ದ ಕೇರಳ ಮೂಲದ ವ್ಯಕ್ತಿಯೋರ್ವನು ಸಾಲಿಗ್ರಾಮ ಪರಿಸರದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಭಾನುವಾರ ಪರಾರಿಯಾಗಿದ್ದಾನೆ.

kota-kerala-police-theif-01

ಪರಾರಿಯಾದ ಅಪರಾಧಿಯನ್ನು ಮಹಮ್ಮದ್ ಅರಲಾಝ್ ಎನ್ನಲಾಗಿದ್ದು, ಸದ್ಯ ಕೇರಳ ಪೊಲೀಸರಿಗೆಗೆ ತಲೆ ನೋವು ನೀಡಿದ್ದು ಅಲ್ಲದೇ, ಸಾಲಿಗ್ರಾಮ ಯಡಬೆಟ್ಟು ಸುತ್ತಮುತ್ತಲಿನ ಪರಿಸರದ ಜನತೆ ನಿದ್ದೆಗೆಡಿಸಿದ್ದಾನೆ.

ಕೇರಳದಲ್ಲಿ ಕಳ್ಳತನ ನಡೆಸಿ ಮುಂಬೈಗೆ ಪರಾರಿಯಾಗಿದ್ದ ಮಹಮ್ಮದ್‍ನನ್ನು ನಾಲ್ಕು ಜನರ ಕೇರಳ ಪೊಲೀಸ್ ತಂಡ, ಮುಂಬೈಗೆ ತೆರಳಿ ಹುಡುಕಿ ಬಂಧಿಸಿತ್ತು. ಮುಂಬೈನಿಂದ ಕೇರಳ ತೆರಳುವ ದಾರಿಯಲ್ಲಿ ಊಟಕ್ಕಾಗಿ ಸಾಲಿಗ್ರಾಮದಲ್ಲಿ ನಿಲ್ಲಿಸಿದಾಗ, ಮಾನವೀಯತೆಯ ದೃಷ್ಠಿಯಿಂದ ಪೊಲೀಸರು ಸರಪಳಿಯಿಂದ ಸಡಿಲಿಕೆ ನೀಡಿದ ಅವಕಾಶವನ್ನೆ ಬಳಸಿಕೊಂಡು ಕಳ್ಳ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ಸಾಲಿಗ್ರಾಮ ಪೇಟೆಯಿಂದ ಕಣ್ಮರೆಯಾಗಿದ್ದಾನೆ.

ಈ ಬಗ್ಗೆ ಸ್ಥಳೀಯ ಕೋಟ ಪೊಲೀಸ್ ಠಾಣೆಯ ನೆರವು ಕೇಳಿದ ಕೇರಳ ಪೊಲೀಸರು ಸಂಜೆಯವರೆಗೆ ಕಳ್ಳನನ್ನು ಬಂಧಿಸಲು ಹುಡುಕಾಟ ನಡೆಸಿದ್ದಾರೆ. ಆದರೆ ಸಂಜೆ ವೇಳೆ ಯಡಬೆಟ್ಟುವಿನಲ್ಲಿ ಕಾಣಿಸಿಕೊಂಡ ಅಪರಿಚಿತ ವ್ಯಕ್ತಿಯನ್ನು ಕಂಡು ಭಯಭೀತರಾದ ಸ್ಥಳೀಯರು ಅಟ್ಟಿಸಿಕೊಂಡು ಬಂದಾಗ, ಸ್ಥಳೀಯರೋರ್ವರ ಕಿಟಕಿ ಬಾಗಿಲು ಬಡಿದು ಮತ್ತೆ ಕತ್ತಲೆಯಲ್ಲಿ ಕಣ್ಮರೆಯಾಗಿದ್ದಾನೆ. ಕಳ್ಳ ಧರಿಸಿದ ಗುಲಾಬಿ ಬಣ್ಣದ ಟೀ ಶರ್ಟ್ ಮತ್ತು ಬರ್ಮುಡಾ ಚಡ್ಡಿಯ ಆಧಾರದ ಮೇಲೆ, ಕೇರಳ ಪೊಲೀಸರಿಗೆ ಬೇಕಾದ ವ್ಯಕ್ತಿ ಈತನೆ ಎಂದು ತಿಳಿದು ಬಂದಿದ್ದು. ಕೋಟ ಪೊಲೀಸ್ ಸಿಬ್ಬಂದಿಗಳು, ಕೇರಳ ಪೊಲೀಸ್ ಸಿಬ್ಬಂದಿಗಳು ಮತ್ತು 30 40 ಜನರ ಸ್ಥಳೀಯ ಉತ್ಸಾಹಿ ಯುವಕರು ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರೆ, ಆದರೆ ಕಳ್ಳ ಮಾತ್ರ ಪತ್ತೆಯಾಗಿಲ್ಲ.