ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆಗೆ ಲೋಕಸಭೆಯಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ
ನವದೆಹಲಿ: ಕೊಂಕಣ ರೈಲ್ವೆ ನಿಗಮದ ವಿಲೀನ, ಮಂಗಳೂರು ರೈಲ್ವೆ ವ್ಯಾಪ್ತಿ ಆಡಳಿತಾತ್ಮಕ ಪುನರ್ ರಚನೆ ಸೇರಿದಂತೆ ರೈಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸೋಮವಾರ ಲೋಕಸಭೆಯಲ್ಲಿ ಸದನದ ಗಮನ ಸೆಳೆದಿದ್ದಾರೆ.
ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾತನಾಡಿದ ಕ್ಯಾ. ಚೌಟ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ರೈಲ್ವೆ ಇಲಾಖೆಯಲ್ಲಿ ಆಗಿರುವ ಗಮನಾರ್ಹ ಅಭಿವೃದ್ಧಿ ಕಾರ್ಯ-ಯೋಜನೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಶೇ.90ರಷ್ಟು ವಿದ್ಯುದ್ದೀಕರಣ ಕೆಲಸ ಆಗಿದ್ದು, ದೇಶವ್ಯಾಪಿ ಸುಮಾರು 1,300 ರೈಲ್ವೆ ನಿಲ್ದಾಣಗಳ ಪುನರ್ ನವೀಕರಣ ಮಾಡಲಾಗಿದೆ. ಜತೆಗೆ, ವಂದೇ ಭಾರತ್ ನಂಥಹ ಸುಧಾರಿತ ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ, ಕ್ಯಾ. ಚೌಟ ಅವರು, ಸುಮಾರು ಒಂದು ದಶಕಗಳಿಂದ ವಿಸ್ತರಣೆಗೆ ಕಾಯುತ್ತಿದ್ದ ಮಂಗಳೂರು-ಪುತ್ತೂರು-ಕಬಕ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್ ಗೆ ವಿಸ್ತರಿಸಿರುವ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿದ ಅವರು, ಇದರಿಂದ ದಿನನಿತ್ಯ ಓಡಾಡುವ ಪ್ರಯಾಣಿಕರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಇದೇ ವೇಳೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,559 ಕೋಟಿ ರೂ. ಹಂಚಿಕೆ ಮಾಡಿದ್ದಕ್ಕಾಗಿ ಅವರು ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ರೈಲ್ವೆ ಮೂಲಸೌಕರ್ಯದಲ್ಲಿ ವೇಗದ ವಿಸ್ತರಣೆಯನ್ನು ಶ್ಲಾಘಿಸಿದ ಚೌಟ ಅವರು, 2014 ರಿಂದ ಕರ್ನಾಟಕದಲ್ಲಿ ಒಟ್ಟು 1,652 ಕಿ.ಮೀ ಹೊಸ ರೈಲ್ವೆ ಹಳಿಗಳನ್ನು ಹಾಕಲಾಗಿದೆ, ಇದು ಶ್ರೀಲಂಕಾದ ಸಂಪೂರ್ಣ ರೈಲು ಜಾಲವನ್ನು ಮೀರಿಸಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಸದನದ ಗಮನಸೆಳೆದ ಸಂಸದ ಕ್ಯಾ. ಚೌಟ ಅವರು, ಆರ್ಥಿಕವಾಗಿ ಹಲವಾರು ಸವಾಲು ಎದುರಿಸುತ್ತಿರುವ ಕೊಂಕಣ ರೈಲ್ವೆ ನಿಗಮ(ಕೆಆರ್ಸಿಎಲ್)ವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು. ಇದರಿಂದ ನಿಗಮದ ಸುಮಾರು 2,589 ಕೋಟಿ ರೂ. ಸಾಲದ ಹೊರೆಯನ್ನು ತಪ್ಪಿಸಿ ಆರ್ಥಿಕ ಸದೃಢತೆಯನ್ನು ಹೆಚ್ಚಿಸಬಹುದು. ಆ ಮೂಲಕ ಕೊಂಕಣ ರೈಲ್ವೆಯ ಕಾರ್ಯ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸುಧಾರಣೆ ತರಬಹುದು ಎಂದು ಹೇಳಿದ್ದಾರೆ.
ಇನ್ನು ಬಹಳ ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿರುವ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಳಿತಾತ್ಮಕ ಅಡೆ-ತಡೆ ದೂರ ಮಾಡುವ ಬಗ್ಗೆ ಪ್ರಸ್ತಾಪಿಸಿದ ಕ್ಯಾ. ಚೌಟ ಅವರು, ಮಂಗಳೂರು ರೈಲ್ವೆ ಭಾಗದ ವ್ಯಾಪ್ತಿಯನ್ನು ದಕ್ಷಿಣ ರೈಲ್ವೆ ವಲಯದ ಪಾಲ್ಘಾಟ್ ವಿಭಾಗದಿಂದ ಬೇರ್ಪಡಿಸಿ ಅದನ್ನು ನೈರುತ್ಯ ರೈಲ್ವೆ ವ್ಯಾಪ್ತಿಗೆ ಬರುವ ಮೈಸೂರು ವಿಭಾಗಕ್ಕೆ ಸೇರಿಸಬೇಕು. ಇದರಿಂದ ಈ ಭಾಗದ ರೈಲ್ವೆ ವಿಚಾರಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸುಧಾರಣೆ ತರುವ ಜತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.
ಎಚ್ಎಂಆರ್ ಡಿಸಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳ್ಳಲಿ
ಬೆಂಗಳೂರು-ಮಂಗಳೂರು ರೈಲ್ವೆ ಸಂಪರ್ಕದ ಬಗ್ಗೆಯೂ ಉಲ್ಲೇಖಿಸಿದ ಸಂಸದ ಕ್ಯಾ. ಚೌಟ ಅವರು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪೆನಿ(ಎಚ್ಎಂಆರ್ಡಿಸಿ)ಯನ್ನು ಕೂಡ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕು ಅಥವಾ ಕರ್ನಾಟಕ ಸರ್ಕಾರದ ಅದರ ಸಂಪೂರ್ಣ ಹೊಣೆಯನ್ನು ನೀಡಿ ಆ ಮೂಲಕ ಸರಕು ಸಾಗಣೆ ಹಾಗೂ ಪ್ರಯಾಣಿಕರ ದಟ್ಟನೆ ಹೆಚ್ಚಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಡುವೆ ಮಂಗಳೂರು ನವಬಂದರು ಹಾಗೂ ಬೆಂಗಳೂರು ನಡುವೆ ಪ್ರತ್ಯೇಕ ಸರಕು ಸಾಗಾಟ ಕಾರಿಡಾರ್ ನಿರ್ಮಿಸುವುದರಿಂದ ಕರಾವಳಿಯ ವ್ಯಾಪಾರ-ವಹಿವಾಟು ಹೆಚ್ಚಿಸುವ ಜತೆಗೆ ಸರಕು ಸಾಗಣೆ ವೆಚ್ಚವನ್ನು ಕಡಿಮೆಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.
ಒಟ್ಟಾರೆ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 2047ರ ವಿಕಸಿತ ಭಾರತ ನಿರ್ಮಾಣಕ್ಕೆ ಈ ಎಲ್ಲ ರೈಲ್ವೆ ಅಭಿವೃದ್ಧಿ ಕಾರ್ಯ ಹಾಗೂ ಸುಧಾರಣಾ ಕ್ರಮಗಳನ್ನು ಆದ್ಯತೆ ಮೇಲೆ ಕಾರ್ಯರೂಪಕ್ಕೆ ತರಬೇಕೆಂದು ಸಂಸದ ಕ್ಯಾ. ಚೌಟ ಅವರು ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದಾರೆ.













