ಕೋಟ: ಎರಡನೆ ಮದುವೆಯನ್ನು ತಡೆದ ಮೊದಲ ಹೆಂಡತಿ; ಮದುಮಗಳಿಗೆ ಬಾಳು ನೀಡಲು ಮುಂದೆ ಬಂದು ಮರ್ಯಾದೆ ಉಳಿಸಿದ ಸಂಬಂಧಿ

Spread the love

ಕೋಟ: ಕೋಟ ಸಮೀಪದ ಮಣೂರು ರಾಜಲಕ್ಷ್ಮೀ ಸಭಾ ಭವನದಲ್ಲಿ ನಡೆಯುತ್ತಿದ್ದ ಮದುವೆಯ ವೇಳೆ, ಬೆಂಗಳೂರು ಮೂಲದ ಯುವತಿಯೋರ್ವಳು ತಾನು ಮದುಮಗನ ಹೆಂಡತಿ ಎಂದು ಹೇಳಿ ಮದುಮಗನನ್ನು ಕರೆದೊಯ್ಯಿದ, ಬಳಿಕ ಮದುವೆ ಮಂಟಪದಲ್ಲಿದ್ದ ಮದುಮಗಳಿಗೆ ಮದುಮಗನ ಸಂಬಂಧಿಕರ ಹುಡುಗನೋರ್ವ ತಾಳಿ ಕಟ್ಟಲು ಸಮ್ಮತಿಸಿ ಸಿನಿಮೀಯ ರೀತಿಯಲ್ಲಿ ಗೃಹಾಸ್ಥಾಶ್ರಮಕ್ಕೆ ಕಾಲಿಟ್ಟು, ಮದುಮಗಳಿಗೆ ಬಾಳು ನೀಡಿದ ಘಟನೆ ಗುರುವಾರದಂದು ನಡೆದಿದೆ. ಸಿನಿಮಾದಲ್ಲಿ, ಟಿವಿ ಧಾರವಾಹಿಗಳಲ್ಲಿ ನಡೆಯುವ ಕಥೆಯಂತೆ ನಡೆದ ಘಟನೆಗೆ ಮದುವೆಗೆ ಬಂದ ಸುಮಾರು 800 ಸಂಬಂಧಿಕರು ಸಾಕ್ಷಿಯಾದರು.

2 3

 ವೀಣಾಳ ಬಾಳಿಗೆ ಹೊಸ ಬೆಳಕು ನೀಡಿದ ದೇವೇಂದ್ರ

ಕೋಟ ಮೂರು ಕೈ ಬಳಿಯ ನಿವಾಸಿ ಶಂಕರ್ ನಾಯಿರಿ ಮತ್ತು ಕಿರಿಮಂಜೇಶ್ವರದ ವೀಣಾ ಅವರಿಗೆ ಗುರು ಹಿರಿಯರ ಮೇ 14ರಂದು ಮದುವೆಗಾಗಿ ದಿನ ನಿಗದಿ ಪಡಿಸಿ, ಸಕಲ ಸಿದ್ಧತೆಯನ್ನು ಮಾಡಿದ್ದರು. ಗುರುವಾರ ಬೆಳಿಗ್ಗೆ ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಮದುವೆಯ ಕ್ರಮಗಳು ಜರುಗುತ್ತಿರುವ ವೇಳೆಯೇ, ಬೆಂಗಳೂರು ಮೂಲದ ಸರಸ್ವತಿ ಎನ್ನುವಾಕೆ ಮದುವೆ ಹಾಲ್‍ಗೆ ಬಂದಿದ್ದಳು. ಹಾಲ್‍ಗೆ ಬರುವಾಗ ಜೊತೆಯಲ್ಲಿ ಬೆಂಗಳೂರು ಅರವಳ್ಳಿಯ ಪೊಲೀಸ್ ಸಿಬ್ಬಂದಿಗಳನ್ನು, ತಾಯಿ ಮತ್ತು ಅತ್ತೆಯನ್ನು ಕರೆದುಕೊಂಡು ಬಂದವಳೆ ಮದುಮಗ ಶಂಕರನನ್ನು ಕರೆದು ವಿಚಾರಿಸಿದ್ದಾಳೆ. ನೆರೆದಿದ್ದ ಸಂಬಂಧಿಕರಿಗೆ ಈ ಸಿನಿಮೀಯ ಘಟನೆಯನ್ನು ಚಕಿತರಾಗಿ ನೋಡುತ್ತಿವಾಗಲೇ, ಸರಸ್ವತಿ ತಾನು ತಂದಿರುವ ಶಂಕರ ಜೊತೆಗಿರುವ ತನ್ನ ಮದುವೆ ಪೋಟೊವನ್ನು ಮದುವೆಗೆ ಬಂದಿರುವ ಸಂಬಂಧಿಕರಿಗೆ ತೋರಿಸಿ, ತನ್ನನ್ನು ಶಂಕರ ಒಂದು ವರ್ಷದ ಹಿಂದೆ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಬಳಿಕ ಸಂಬಂಧಿಕರು ಈ ಗೊಂದಲ ಅರ್ಥವಾಗದೇ ಇದ್ದಾಗ ಶಂಕರನನ್ನು ಮತ್ತು ಸರಸ್ವತಿಯನ್ನು ಸ್ಥಳೀಯ ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಿದಾಗ, ಶಂಕರ ತಾನು ಸರಸ್ವತಿಯನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾನೆ.

 ಆದರೆ ಘಟನೆಯಿಂದ ಶಾಕ್‍ಗೆ ಒಳಗಾಗಿದ್ದು ಮದುಮಗಳಾದ ವೀಣಾ. ಚಿಕ್ಕಂದಿನಲ್ಲಿಯೇ ಅತ್ಯಂತತ ಕಡು ಬಡತನದಲ್ಲಿ ಬೆಳೆದ ವೀಣಾ ಕಿರಿಮಂಜೇಶ್ವರ ನ್ಯಾಯ ಬೆಲೆ ಅಂಗಡಿಯಲ್ಲಿ ಕಷ್ಟ ಪಟ್ಟು ದುಡಿದು, ಮದುವೆಗಾಗಿ ಚಿನ್ನ ಮಾಡಿಸಿ, ಮದುವೆ ಖರ್ಚಿಗಾಗಿ ಬ್ಯಾಂಕ್‍ನಲ್ಲಿ ಸಾಲ ಮಾಡಿ ಹಸೆಮಣೆ ಏರಿದ ಹುಡುಗಿ. ವೀಣಾ ಬಗ್ಗೆ ತಿಳಿದಿದ್ದ ಸಂಬಂಧಿಕರು ಮುಂದೆನೂ ಎಂದು ತಮ್ಮಲ್ಲೆ ಮಾತುಕತೆ ನಡೆಸುತ್ತಿರುವ, ಮದುವೆಯಾಗಬೇಕಿದ್ದ ಹುಡುಗ ಕಡೆಯ ದೇವೇಂದ್ರ ಎನ್ನುವಾತ ಹುಡುಗಿಯ ಭವಿಷ್ಯದ ಬಗ್ಗೆ ಯೋಚಿಸಿ, ಮಾನವೀಯತೆ ಮೆರೆದು ತಾನು ಹುಡುಗಿಯನು ಇದೇ ಮಹೂರ್ತದಲ್ಲಿ ವೀಣಾಳನ್ನು ವರಿಸುವುದಾಗಿ ತಿಳಿಸಿದಾಗ ಹುಡುಗಿಯು ಒಪ್ಪಿ, ಅದೇ ಮಹೂರ್ತದಲ್ಲಿ ದೇವೇಂದ್ರ ಹಾಗೂ ವೀಣಾ ಮದುವೆ ನಡೆಯಿತು.1

ಸರಸ್ವತಿ ಶಂಕರ ಮದುವೆ ಸಂದರ್ಭದ ಪೋಟೋ

4

ಸರಸ್ವತಿ ಸಂಬಂಧಿಕರ ಜೊತೆಗೆ ಶಂಕರ.

ಇತ್ತ ಠಾಣೆಯಲ್ಲಿ ಬೆಂಗಳೂರಿನ ಅರವಳ್ಳಿಯ ಸರಸ್ವತಿ ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಸಮ್ಮುಖದಲ್ಲಿ ಪೊಲೀಸ್‍ರಿಗೆ ನೀಡಿದ ಮಾಹಿತಿಯಂತೆ, ಶಂಕರ ಬೆಂಗಳೂರಿಗೆ ಕಾರ್ಯ ನಿಮಿತ್ತ ಬಂದ ವೇಳೆ, ಸರಸ್ವತಿ ಅವರಿಗೆ ಮಿಸ್ ಕಾಲ್ ಒಂದು ಬಂದಿತ್ತು. ಅದೇ ಸಂಖ್ಯೆಗೆ ಮರಳಿ ಕರೆ ಮಾಡಿದಾಗ ಶಂಕರ ತಾನು ಮಿಸ್ ಆಗಿ ಕಾಲ್ ಮಾಡಿರುದಾಗಿ ತಿಳಿಸಿದ್ದ, ಇದು ಇರ್ವರ ಪ್ರಥಮ ಮಾತಕತೆ. ಮಿಸ್ ಕಾಲ್ ಹಿನ್ನೆಲೆಯಲ್ಲಿ ಬೆಳೆದ ಇರ್ವರ ಗೆಳೆತನ 4 ವರ್ಷಗಳ ಕಾಲ ಪ್ರೇಮವಾಗಿ, ಕಳೆದ ಒಂದು ವರ್ಷದ ಹಿಂದೆ ಬೆಂಗಳೂರು ಬೋಳಾರ ಮುನೇಶ್ವರ ದೇವಸ್ಥಾನದಲ್ಲಿ ಸರಸ್ವತಿ ಸಂಬಂಧಿಕರ ಸಮ್ಮುಖ ತಾಳಿ ಕಟ್ಟುವ ಮೂಲಕ ಮದುವೆಯಲ್ಲಿ ಸಮಾಪ್ತಿಯಾಗಿತ್ತು. ಮೊದಲು ಗಾರ್ಮೇಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸರಸ್ವತಿ ಇತ್ತೀಚೆಗಷ್ಟೆ ಕೆಲಸ ಬಿಟ್ಟಿದ್ದಳು. ಮಣಿಪಾಲದ ಪ್ರೆಸ್‍ನಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ ಆಗೋಮ್ಮೆ ಈಗೋಮ್ಮೆ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ಈ ಮದುವೆಗೆ ಹಿಂದೆ ಒಂದು ವಾರದಿಂದ ಸರಿಯಾಗಿ ಸಂಪರ್ಕಕ್ಕೆ ಸಿಗದ ಕಾರಣ, ಸರಸ್ವತಿ ಅವರು ಶಂಕರ್ ಅವರ ಸಹದ್ಯೋಗಿ ಕರೆ ಮಾಡಿದಾಗ, ಶಂಕರ ಮದುವೆಯಾಗುತ್ತಿರುವ ಮಾಹಿತಿ ಸಿಕ್ಕಿದೆ. ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ ಸರಸ್ವತಿ ತನ್ನ ತಾಯಿ, ಅತ್ತೆ ಮತ್ತು ಬೆಂಗಳೂರು ಪೊಲೀಸ್ ಸಿಬ್ಬಂದಿ ಜೊತೆ ನೇರ ಮಣೂರು ಕಲ್ಯಾಣ ಮಂಟಪಕ್ಕೆ ಬಂದಿದ್ದಾಳೆ.

 ಈ ಘಟನೆ ಸಿನಿಮೀಯವಾಗಿ ಕಂಡರೂ ಅಷ್ಟೆ ನಿಜ. ಕಡು ಬಡತನದಿಂದ ಬಂದ ವೀಣಾ ಅವಳ ಬಗ್ಗೆ ಕರುಣೆ ಪ್ರೀತಿ ಒಂದೆಡೆಯಾದರೆ, ಇಬ್ಬರೂ ಹೆಣ್ಣು ಮಕ್ಕಳ ಬಾಳಲ್ಲಿ ಆಟ ಆಡಲು ಹೊರಟ ಶಂಕರ ಬಗ್ಗೆ ಕೋಪ. ಇಷ್ಟೆಲ್ಲಾ ಸಮಸ್ಯೆ ಗೊಂದಲದ ನಡುವೆ ಪ್ರಕರಣ ಸುಖಾಂತ್ಯ ಕಂಡಿದ್ದು. ಶುಕ್ರವಾರ ಕೊಲ್ಲೂರು ಮುಕಾಂಬಿಕೆಯ ಸನ್ನಧಿಯಲ್ಲಿ ಶಂಕರ ಮತ್ತು ಸರಸ್ವತಿ ಅವರಿಗೆ ಸಂಬಂಧಿಕರ ನಡುವೆ ಮತ್ತೋಮ್ಮೆ ಮದುವೆ ಶಾಸ್ತ್ರ ನಡೆಯಲಿದೆ ಎಂದು ಶಂಕರ ಸಂಬಂಧಿಕರು ತಿಳಿಸಿದ್ದಾರೆ.


Spread the love